ಹೊಸನಗರ : ಮಸರೂರು ಮೀಸಲು ಅರಣ್ಯದಲ್ಲಿ ಲಕ್ಷಾಂತರ ರೂ. ಮೌಲ್ಯದ ಸಾಗುವಾನಿ ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟಕ್ಕೆ ಯತ್ನಿಸುತ್ತಿದ್ದ ಮಾಹಿತಿ ತಿಳಿದು ಅರಸಾಳು ವಲಯ ಅರಣ್ಯಾಧಿಕಾರಿ ಶರಣಪ್ಪನವರ ನೇತೃತ್ವದಲ್ಲಿ ದಾಳಿ ನಡೆಸಿ ಸಾಗುವಾನಿ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಾದ ಕೆಂಚನಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊನ್ನಕೊಪ್ಪ ವಾಸಿಗಳಾದ ಕಿರಣ್ ಕುಮಾರ್, ಪರಶುರಾಮ, ಪರ್ವತಪ್ಪ, ಸಂಜಯ್, ಕಿರಣ್, ಮಾಣಿಕೆರೆ ನಿವಾಸಿಗಳಾದ ಎಂ.ಆರ್.ಆಶೋಕ, ಎಂ.ಅರ್.ಜಗದೀಶ ಮಾಣಿಕೆರೆ, ಸಚಿನ್, ಸುರೇಶ್ ಮಾಣಿಕೆರೆ, ರಾಘವೇಂದ್ರ, ಪ್ರಭಾಕರ್ ಎಂದು ಶಂಕಿಸಲಾಗಿದ್ದು ಇವರ ಪತ್ತೆಗಾಗಿ ಅರಣ್ಯ ಇಲಾಖೆ ಬಲೆ ಬೀಸಿದೆ ಎಂದು ವಲಯ ಅರಣ್ಯಾಧಿಕಾರಿ ಶರಣಪ್ಪ ತಿಳಿಸಿದ್ದಾರೆ.
ಸಿರಿಗೆರೆ ಮತ್ತು ಅರಸಾಳು ವ್ಯಾಪ್ತಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ಸಾಗುವಾನಿ ಮರಗಳನ್ನು ಎಗ್ಗಿಲ್ಲದೆ ಅಕ್ರಮ ಸಾಗಾಣಿಕೆ ಮಾಡಲಾಗುತ್ತಿದ್ದರೂ ಕೂಡಾ ಇಲಾಖೆಯ ಸಿಬ್ಬಂದಿ ವರ್ಗ ಇತ್ತ ಗಮನಹರಿಸದೇ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿ ಇಲಾಖೆಯ ಸಿಬ್ಬಂದಿ ಕೈವಾಡ ಇರಬಹುದೆಂದು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.
ವನ ರಕ್ಷಕ ಮತ್ತು ವನಪಾಲಕರ ಕಾರ್ಯ ಏನು ?
ಪ್ರತಿನಿತ್ಯ ವನ ರಕ್ಷಕರು ಮತ್ತು ವನಪಾಲಕರು ತಮ್ಮ ವ್ಯಾಪ್ತಿಯಲ್ಲಿ ಓಡಾಡಿ ಅರಣ್ಯ ಪ್ರದೇಶದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಗಸ್ತು ಮಾಡಿ ವರದಿ ನೀಡಬೇಕು ಎಂಬ ನಿಯಮವಿದ್ದರೂ ಕೂಡಾ ಲಕ್ಷಾಂತರ ರೂ. ಮೌಲ್ಯದ ಸಾಗುವಾನಿ ಮರಗಳ ಮಾರಣ ಹೋಮ ನಡೆಯುತ್ತಿದ್ದರೂ ಕೂಡಾ ಇವರ ಗಮನಕ್ಕೆ ಬಾರದಿರುವುದರ ಹಿಂದಿನ ಮರ್ಮ ಏನು ? ಕೇಂದ್ರ ಸ್ಥಾನದಲ್ಲಿ ಇಲ್ಲದೇ ಇರುವುದೇ ಈ ರೀತಿಯ ಕೃತ್ಯಕ್ಕೆ ಕಾರಣವೆನ್ನಲಾಗಿದೆ.
ಇನ್ನಾದರೂ ಸಂಬಂಧಿಸಿದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ಅಕ್ರಮ ಅವ್ಯವಹಾರಗಳಿಗೆ ಕಡಿವಾಣ ಹಾಕುವ ಮೂಲಕ ಲಕ್ಷಾಂತರ ರೂ. ಮೌಲ್ಯದ ಸಾಗುವಾನಿ ಮರಗಳ ಕಡಿತಲೆ ನಡೆಸಿದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವರೆ ಕಾದು ನೋಡಬೇಕಾಗಿದೆ.
Kshetra Samachara
04/01/2025 09:31 pm