ಬೆಂಗಳೂರು: ಸುವರ್ಣಸೌಧದಲ್ಲಿ ಏನೇನಾಯ್ತು ಅನ್ನೋದನ್ನ ಇಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸ್ವತಃ ಸಿ.ಟಿ. ರವಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಪರಿಷತ್ ನಲ್ಲಿ ನಡೆದ ಘಟನೆ ವಿಚಾರವಾಗಿ ನನ್ನ ಮೇಲೆ ಕೊಲೆ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದರು. ಮೂರ್ನಾಲ್ಕು ಜನ ಹಲ್ಲೆ ಮಾಡಲು ಬಂದರು. ನಿನ್ನ ಕೊಲೆ ಮಾಡುತ್ತೇವೆ, ನಿನ್ನ ಹೆಣ ಚಿಕ್ಕಮಗಳೂರಿಗೆ ಕಳುಹಿಸುತ್ತೇವೆ ಎಂದು ಕೂಗಾಡಿದರು.
ಮಾರ್ಷಲ್ ಗಳ ಸಮ್ಮುಖದಲ್ಲಿ ನನ್ನ ಮೇಲೆ ಹಲ್ಲೆಗೆ ಯತ್ನಿಸಿದರು. ಆಗ ನಾನು ಅಲ್ಲೇ ಧರಣಿ ಕೂತೆ. ನಂತರ ಸಭಾಪತಿಗಳು ಕರೆದರು ಎಂದು ನಾನು ಅವರ ಬಳಿ ಏನೇನಾಗಿದೆ ಎಂದು ಸಭಾಪತಿಗಳಿಗೆ ವಿವರಿಸಿದೆ. ತದನಂತರ ಮತ್ತೆ ಕಲಾಪ ಆರಂಭವಾಗಿ ಸ್ಪೀಕರ್ ರೂಲಿಂಗ್ ಹೇಳಿ ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಬಳಿಕ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಅವರ ಸಹೋದರ ಚನ್ನರಾಜ್ ಹಟ್ಟಿಹೊಳಿ ನನ್ನನ್ನು ಏಕವಚನದಲ್ಲಿ ನಿಂದಿಸಿದರು. ಕತೆ ಮುಗಿಸುವುದಾಗಿ ಪರಿಷತ್ ಒಳಗಡೆಯೇ ಬೆದರಿಕೆ ಹಾಕಿದರು. ನಂತರ ನಾನು ಸಭಾಪತಿ ಕೊಠಡಿಗೆ ಹೋಗಿ ಅಲ್ಲಿ ಏನಾಯ್ತು ಅಂತ ಹೇಳಿ ಲಿಖಿತ ದೂರು ನೀಡಿದೆ. ಸಭಾಪತಿಯವರು ಎಡಿಜಿಪಿಯವರನ್ನು ಕರೆದು ಸಿ.ಟಿ. ರವಿ ಅವರನ್ನು ಯಾವುದೇ ತೊಂದರೆ ಆಗದೇ ಮನೆಗೆ ತಲುಪಿಸಬೇಕು ಮತ್ತು ಹಲ್ಲೆಗೆ ಮುಂದಾಗಿದ್ದವರ ವಿರುದ್ಧವೂ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಈ ಘಟನೆಗೆ ಸಂಬಂಧಿಸಿದಂತೆ ನಾನು ಸುವರ್ಣಸೌಧದಲ್ಲೇ ಪ್ರತಿಭಟನೆಗೆ ಕೂತಾಗ ನನ್ನನ್ನು ಪೊಲೀಸರು ಎತ್ತಿಕೊಂಡು ಹೋದರು. ಹಿರೇಬಾಗೇವಾಡಿ ನಂತರ ಖಾನಾಪುರಕ್ಕೆ ಕರೆದುಕೊಂಡು ಹೋದರು. ಯಾಕೆ ನನ್ನನ್ನು ಕರೆದುಕೊಂಡು ಬಂದಿದ್ದೀರಿ ಎಂದು ಪ್ರಶ್ನಿಸಿದರೆ ಅವರು ಉತ್ತರ ನೀಡುತ್ತಿರಲಿಲ್ಲ. ಏನ್ ದೂರು ಇದೆ. ಹೇಳಿ. FIR ಕಾಪಿ ತೋರಿಸಿ ಎಂದರೂ ಪೊಲೀಸರು ಉತ್ತರಿಸುತ್ತಿರಲಿಲ್ಲ. ನಮ್ಮ ವಕೀಲರನ್ನು ಒಳಗಡೆ ಬಿಡಲಿಲ್ಲ. ನಂತರ ಅಶೋಕ್ ಬಂದರು. ಆಗ ವಕೀಲರನ್ನು ಒಳಗಡೆ ಬಿಟ್ಟರು. ಬಳಿಕ ಎಲ್ಲರನ್ನೂ ಹೊರಗಡೆ ಕಳುಹಿಸಿ ನನ್ನನ್ನು ಮಾತ್ರ ಅಲ್ಲೇ ಇರಿಸಿಕೊಂಡರು. ಪೊಲೀಸರು ಮಾತ್ರ ಆಗಾಗ್ಗೆ ಯಾರ ಜೊತೆಯೋ ಫೋನ್ ನಲ್ಲಿ ಮಾತನಾಡುತ್ತಿದ್ದರು.
ಆಗ ಮತ್ತೆ ಖಾನಪುರದಿಂದ ಬೇರೆ ಕಡೆ ಕರೆದುಕೊಂಡು ಹೋಗಲು ಪೊಲೀಸರು ಸಿದ್ಧತೆ ನಡೆಸಿದರು. ಆಗ ನಾನು ಯಾವ ದೂರು? ಯಾಕೆ ಕರೆದುಕೊಂಡು ಬಂದಿದ್ದೀರಾ ಹೇಳಿ ಅಂದರೂ ಹೇಳದ ಕಾರಣ ನಾನು ಬರಲ್ಲ ಎಂದೆ. ಆಗ ನನ್ನನ್ನು ಎತ್ತಿಕೊಂಡು ಪೊಲೀಸ್ ವಾಹನಕ್ಕೆ ಹಾಕಿದರು. ಈ ವೇಳೆ ತಲೆಗೆ ಗಾಯ ಆಯ್ತು. ರಾತ್ರಿ ಕಿತ್ತೂರು, ಧಾರವಾಡ, ಮುಧೋಳ ಹೀಗೆ ಸುತ್ತಾಡಿಸಿದ್ರು. ಕೇಳಿದರೆ ಬೆಳಗಾವಿಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದರು.
ನಾನು ಕಣ್ಣು ಬಿಟ್ಟು ನೋಡಿದರೆ ಧಾರವಾಡ ಹೈಕೋರ್ಟ್ ಕಾಣಿಸಿತು. ನಾನು, ನೀವು ಸುಳ್ಳು ಹೇಳುತ್ತಿದ್ದೀರಿ ಎಂದು ಹೇಳಿ ಗಾಡಿ ನಿಲ್ಲಿಸಲು ಹೇಳಿದೆ. ಆದರೂ ಪೊಲೀಸರು ಗಾಡಿ ನಿಲ್ಲಿಸಲಿಲ್ಲ. ಇದಕ್ಕೆ ವಿರೋಧಿಸಿ ಗಾಡಿಯಿಂದ ಇಳಿಯಲು ಪ್ರಯತ್ನ ಪಟ್ಟೆ. ಆಗ ನನ್ನನ್ನು ಪೊಲೀಸರು ಬಲವಾಗಿ ಹಿಡಿದಿದ್ದರಿಂದ ಕೈಗೆ ಮತ್ತು ಹೊಟ್ಟೆಗೆ ಮೂಗೇಟಾಯ್ತು ಎಂದು ವಿವರಿಸಿದರು.
ಆಗ ಪತ್ನಿಗೆ ನನ್ನ ಲೈವ್ ಲೊಕೇಶನ್ ಕಳುಹಿಸಿದೆ. ಕಬ್ಬಿನ ಗದ್ದೆಯೊಂದಕ್ಕೆ ಕರ್ಕೊಂಡು ಹೋದರು. ಎಲ್ಲರನ್ನೂ ಕಣ್ಣು ತಪ್ಪಿಸಿ ಮತ್ತೆ ಬೇರೆ ಕಡೆ ಕರೆದೊಯ್ದರು. ತಲೆಗೆ ಪೆಟ್ಟು ಬಿದ್ದಿದ್ದರಿಂದ ರಾಮದುರ್ಗದಲ್ಲಿ ಲೋಕಲ್ ನರ್ಸ್ ಮೂಲಕ ಬ್ಯಾಂಡೇಜ್ ಮಾಡಿಸಿದರು. ಬಳಿಕ ಅಲ್ಲಿಂದ ಕಾಡಿನ ರಸ್ತೆ, ಗದ್ದೆಗೆಲ್ಲ ಕರ್ಕೊಂಡು ಹೋದ್ರು. ಸ್ಟೋನ್ ಕ್ರಷರ್ ಒಂದಕ್ಕೂ ಕರ್ಕೊಂಡು ಹೋದರು. ಆಗ ನಾನು ಜೋರಾಗಿ ಕಿರುಚಿ ಪ್ರತಿಭಟಿಸಿದೆ. ಸದ್ಯ ಅಲ್ಲಿಗೆ ಮಾಧ್ಯಮದವ್ರು ಬಂದಿದ್ದರು. ನಾನು ಮತ್ತೆ ಚೀರಾಡಿದೆ. ನನ್ನ ಹತ್ಯೆ ಮಾಡಲು ಕರೆದುಕೊಂಡು ಬಂದಿದ್ದೀರಾ ಎಂದು ಕೇಳಿದೆ.
ನನ್ನ ಫೋನ್ ಪಡೆಯಲು ಸಾಕಷ್ಟು ಒತ್ತಡ ಹಾಕಿದ್ರು. ಆದ್ರೆ, ನಾನು ಫೋನ್ ಕೊಡದೇ ವಿರೋಧಿಸಿದೆ. ನನ್ನನ್ನು ಹೀಗೆ ನಿರ್ಜನ ಪ್ರದೇಶ ಮತ್ತು ಕಬ್ಬಿನ ಗದ್ದೆಗೆ ಕರೆದೊಯ್ದಿದ್ದು ನನ್ನನ್ನು ಕೊಲೆ ಮಾಡುವ ಸಂಚು ಅವರಿಗೆ ಇತ್ತು ಎಂದು ಆರೋಪಿಸಿದರು. ಅಲ್ದೇ ಈ ಎಲ್ಲಾ ವಿಚಾರವನ್ನು ನ್ಯಾಯಾಧೀಶರ ಮುಂದೆ ತಿಳಿಸಿದ್ದೇನೆ ಎಂದರು.
PublicNext
21/12/2024 06:20 pm