ನಂಜನಗೂಡು: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನಂಜನಗೂಡಿನ ಶ್ರೀ ನಂಜುಂಡೇಶ್ವರಸ್ವಾಮಿ ದೇವಾಲಯದ ಕಪಿಲಾ ನದಿ ಸ್ನಾನಘಟ್ಟದ ಬಳಿ ಶುಕ್ರವಾರ ರಾತ್ರಿ ಕಪಿಲಾ ಆರತಿ ಕಾರ್ಯಕ್ರಮವು ಸಡಗರ ಸಂಭ್ರಮದಿಂದ ನಡೆಯಿತು. ನಂಜನಗೂಡು ಯುವ ಬ್ರಿಗೇಡ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 8ನೇ ವರ್ಷದ ಕಪಿಲಾ ಆರತಿ ಕಾರ್ಯಕ್ರಮ ಇದಾಗಿದ್ದು, ಉತ್ತರ ಭಾರತದ ಗಂಗಾ ನದಿಯಲ್ಲಿ ಆಚರಿಸುವ ಗಂಗಾರತಿ ಮಾದರಿಯಲ್ಲಿ ದಕ್ಷಿಣ ಕಾಶಿ ನಂಜನಗೂಡಿನ ಕಪಿಲಾ ನದಿಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಜೊಂಡು ಹಾಗೂ ತ್ಯಾಜ್ಯಗಳಿಂದ ಕೂಡಿದ್ದ ಕಪಿಲಾ ನದಿ ಸ್ನಾನಘಟ್ಟ ಹಾಗೂ ಹದಿನಾರು ಕಾಲು ಮಂಟಪದ ಬಳಿ ಸ್ವಚ್ಛಗೊಳಿಸಿ ವಿದ್ಯುತ್ ದೀಪಗಳಿಂದ ಅಲಂಕರಿಸಿ ಇಡೀ ನದಿಯ ದಡ ಜಗ ಮಗಿಸುವಂತಿತ್ತು. ನದಿ ಮಧ್ಯ ಭಾಗದಲ್ಲಿ ಕಪಿಲಾ ಆರತಿಗಾಗಿ ಭವ್ಯವೇದಿಕೆಯನ್ನು ನಿರ್ಮಾಣ ಮಾಡಿ ಕನ್ನಡ ಮಾತೆ ಶ್ರೀ ಭುವನೇಶ್ವರಿ ಪುತ್ಥಳಿ ಪ್ರತಿಷ್ಠಾಪಿಸಿ ಇಡೀ ವೇದಿಕೆಯನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಭವ್ಯ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ದೀಪ ಹಾಗೂ ಜ್ಯೋತಿ ಹಚ್ಚುವ ಮೂಲಕ ಹರಿಹರ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮಿಗಳು ಹಾಗೂ ಮಹದೇಶ್ವರ ಬೆಟ್ಟದ ಸಾಲೂರು ಮಠದ ಡಾ. ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಮೂಡಗೂರು ವಿರಕ್ತಮಠದ ಶ್ರೀ ಇಮ್ಮಡಿ ಉದ್ದಾನ ಸ್ವಾಮೀಜಿಗಳು ಚಾಲನೆ ನೀಡಿದರು.
ಬಳಿಕ ವಿಪ್ರರ ವೇದ ಘೋಷದೊಂದಿಗೆ ಭಾರತ ದೇಶದ ಹಲವಾರು ಪುಣ್ಯ ನದಿಗಳ ಹೆಸರಿನಲ್ಲಿ ದೂಪ, ದೀಪ, ಆರತಿ ಕಾರ್ಯಕ್ರಮಗಳು ನಡೆದವು. ನೆರೆದಿದ್ದ ಸಾವಿರಾರು ಭಕ್ತರು ಕಪಿಲಾರತಿಯ ದೃಶ್ಯವನ್ನು ಕಣ್ತುಂಬಿ ಕೊಂಡರು. ಇದೇ ಮೊದಲ ಬಾರಿಗೆ ನಂಜನಗೂಡು ಹಾಗೂ ಕಪಿಲಾ ನದಿಯ ಇತಿಹಾಸ ಸಾರುವ ಲೇಸರ್ ಶೋ ನಡೆಸಲಾಯಿತು. ಅಲ್ಲದೆ ಭಕ್ತಿ ಗೀತೆ ಸೇರಿದಂತೆ ಕಪಿಲಾ ನದಿ ಸ್ನಾನ ಘಟ್ಟದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿತ್ತು.
ಸಾವಿರಾರು ಭಕ್ತರು ದೀಪಗಳನ್ನು ಹಚ್ಚುವ ಮೂಲಕ ಕಪಿಲಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಭಕ್ತಿ ಭಾವ ಮೆರೆದರು.
ಕಾರ್ಯಕ್ರಮದಲ್ಲಿ ಸ್ಥಳ ಪುರೋಹಿತರಾದ ಕೃಷ್ಣ ಜೋಯಿಸ್, ಯುವ ಬ್ರಿಗೇಡ್ ನ ಸಂಚಾಲಕರಾದ ಚಂದ್ರಶೇಖರ್, ಸುನೀಲ್, ಕಿಶೋರ್, ಚಂದನ್, ಶ್ರೀನಿವಾಸ್, ನಿತಿನ್, ಗಿರೀಶ್, ರವಿ ಶಾಸ್ತ್ರಿ, ಮಹದೇವ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Kshetra Samachara
14/12/2024 05:13 pm