ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಖಾಯಂಮಾತಿಗಾಗಿ ಒತ್ತಾಯಿಸಿ ಅತಿಥಿ ಶಿಕ್ಷಕರ ಧರಣಿ ಸತ್ಯಾಗ್ರಹ

ಬೆಳಗಾವಿ: ತಮ್ಮನ್ನು ಸರ್ಕಾರ ಖಾಯಂ ನೇಮಕಾತಿ ಮಾಡಿಕೊಳ್ಳಬೇಕು. ಅತಿಥಿ ಶಿಕ್ಷಕರ ಬದಲಾಗಿ ಗೌರವ ಶಿಕ್ಷಕರೆಂದು ಘೋಷಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಸುವರ್ಣ ಸೌಧದ ಬಳಿ ಇರುವ ಸುವರ್ಣ ಗಾರ್ಡನ್ ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಅತಿಥಿ ಶಿಕ್ಷಕರು ಸರ್ಕಾರ ನಮ್ಮ ಆಶೋತ್ತರಗಳಿಗೆ ಸ್ಪಂದಿಸುತ್ತಿಲ್ಲ‌. ರಾಜ್ಯಾದ್ಯಂತ 45,000 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನಾವು ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದೇವೆ. ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ, ಸಚಿವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.

ನಿರಂತರವಾಗಿ 13 ವರ್ಷಗಳಿಂದಲೂ ಈ ವೃತ್ತಿಯೇ ನಮ್ಮ ಬದುಕಿಗೆ ಆಧಾರವಾಗಿದೆ. ಆದರೆ ಇದನ್ನೇ ನಂಬಿಕೊಂಡ ನಮಗೆ ಯಾವುದೇ ರೀತಿಯ ಉದ್ಯೋಗ ಭದ್ರತೆ ಸೇರಿದಂತೆ ಕನಿಷ್ಠ ವೇತನವಾಗಲಿ ನೀಡದೇ 9 ತಿಂಗಳ ಬಳಿಕ ಮತ್ತೆ ಬೇರೆಡೆಗೆ ಕೆಲಸಕ್ಕೆ ಅಲೆದಾಡುವ ಸ್ಥಿತಿಗೆ ಸರ್ಕಾರ ನಮ್ಮನ್ನು ತಂದೊಡ್ಡಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ನಮಗೆ ಸರ್ಕಾರ ನೀಡುವ 10 ಸಾವಿರ ಹಣದಲ್ಲಿ ಜೀವನ ಸಾಗಿಸುವುದು ದುಸ್ತರವಾಗಿದೆ. ಪ್ರತಿವರ್ಷ ತಮಗೆ ಬೇಕಾದಾಗ ಸರ್ಕಾರ ನಮ್ಮನ್ನು ನೇಮಕ ಮಾಡಿಕೊಂಡು ಮಾರ್ಚ್ 31ಕ್ಕೆ ನಡು ನೀರಿನಲ್ಲಿ ಕೈ ಬಿಡುತ್ತಿದೆ ಎಂದು ಸರ್ಕಾರದ ನಡೆಗೆ ಅಸಮಾಧಾನ ಹೊರಹಾಕಿದರು.

ಪ್ರತಿ ವರ್ಷ ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಮೆರಿಟ್ ಪದ್ಧತಿ ಕೈ ಬಿಟ್ಟು ಮೊದಲು ಕಾರ್ಯನಿರ್ವಹಿಸಿದವರಿಗೆ ಮೊದಲ ಆದ್ಯತೆ ನೀಡಬೇಕು.‌ ರಾಜ್ಯದಲ್ಲಿ ಕಾರ್ಯನಿರ್ವಹಿಸಿದ ಅತಿಥಿ ಶಿಕ್ಷಕರಿಗೆ ಸೇವಾಭದ್ರತೆಯನ್ನು ಒದಗಿಸಬೇಕು. ಸರಕಾರಿ ಶಿಕ್ಷಕರಂತೆ ಬೇಸಿಗೆಯ ರಜೆಯನ್ನು ಸೇರಿ 12 ತಿಂಗಳು ವೇತನವನ್ನು ನೀಡುವುದರ ಜೊತೆಗೆ ಸೇವೆಯಲ್ಲಿ ಮುಂದುವರೆಸಬೇಕು. ಅತಿಥಿ ಶಿಕ್ಷಕ ಎಂಬ ಪದವನ್ನು ತೆಗೆದುಹಾಕಿ ಗೌರವ ಅಥವಾ ಅರೆಕಾಲಿಕ ಶಿಕ್ಷಕ ಎಂದು ನಮೂದಿಸಿಬೇಕು. ಅತಿಥಿ ಶಿಕ್ಷಕ/ಶಿಕ್ಷಕಿಯರಿಗೆ ಜೀವ ವಿಮೆ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

Edited By : Suman K
Kshetra Samachara

Kshetra Samachara

13/12/2024 03:28 pm

Cinque Terre

5.1 K

Cinque Terre

0

ಸಂಬಂಧಿತ ಸುದ್ದಿ