ಹೈದರಾಬಾದ್: ಸಂಧ್ಯಾ ಥಿಯೇಟರ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅವರನ್ನು ಚಿಕ್ಕಡಪಲ್ಲಿ ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 4ರಂದು ನಡೆದ ʻಪುಷ್ಪ 2: ದಿ ರೂಲ್ʼನ ಪ್ರೀಮಿಯರ್ ಶೋ ವೇಳೆ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತ ಸಂಭವಿಸಿ ರೇವತಿ (39) ಎಂಬ ಮಹಿಳೆ ಸಾವನ್ನಪ್ಪಿದ್ದರು. ಅವರ 9 ವರ್ಷದ ಮಗ ಕಾಲ್ತುಳಿತಕ್ಕೆ ಸಿಕ್ಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಪ್ರಕರಣದಲ್ಲಿ ಅಲ್ಲು ಅರ್ಜುನ್ ಸಹ ಆರೋಪಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಇಂದು ಅಲ್ಲು ಅರ್ಜುನ್ ಅವರನ್ನು ಬಂಧಿಸಿ, ಚಿಕ್ಕಡಪಲ್ಲಿ ಠಾಣೆಗೆ ಕರೆದೊಯ್ದಿದ್ದಾರೆ.
ಪ್ರಕರಣ ಕುರಿತು ಈ ಮೊದಲೇ ಹೈದರಾಬಾದ್, ಚಿಕ್ಕಡಪಲ್ಲಿ ಪೊಲೀಸರು ಅಲ್ಲು ಅರ್ಜುನ್ ಅವರಿಗೆ ನೊಟೀಸ್ ನೀಡಿದ್ದರು. ಆದರೆ ನೊಟೀಸಿಗೆ ಅವರು ಉತ್ತರ ನೀಡಿರಲಿಲ್ಲ ಎನ್ನಲಾಗಿದೆ. ಆದರೆ ಅವರು ಪ್ರಕರಣವನ್ನು ರದ್ದು ಮಾಡುವಂತೆ ತೆಲಂಗಾಣ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
ಅಂದು ಆಗಿದ್ದೇನು;?
ಸರಿಸುಮಾರು ರಾತ್ರಿ 9:30 ಕ್ಕೆ, ಅಲ್ಲು ಅರ್ಜುನ್ ಅವರು ತಮ್ಮ ವೈಯಕ್ತಿಕ ಭದ್ರತಾ ತಂಡದೊಂದಿಗೆ ಥಿಯೇಟರ್‌ಗೆ ಆಗಮಿಸಿದರು, ಅವರನ್ನು ನೋಡಲು ಜನರು ಉತ್ಸುಕರಾಗಿದ್ದರು. ಕೆಳಗಿನ ಬಾಲ್ಕನಿ ಪ್ರದೇಶಕ್ಕೆ ಪ್ರವೇಶಿಸಲು ಅವರ ಭದ್ರತಾ ತಂಡವು ಗುಂಪನ್ನು ತಳ್ಳಿತು. ನಂತರದ ಅವಾಂತರದಲ್ಲಿ ರೇವತಿ ಮತ್ತು ಆಕೆಯ ಮಗ ಶ್ರೀತೇಜ್ ಸಿಲುಕಿ ಉಸಿರುಗಟ್ಟಿದರು. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ರೇವತಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು, ಆದರೆ ಶ್ರೀತೇಜ್ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
PublicNext
13/12/2024 02:03 pm