ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ - ಯುವಕರಿಬ್ಬರಿಗೆ ಕಾರಾಗೃಹ ಶಿಕ್ಷೆ, ದಂಡ

ಮಂಗಳೂರು: ಆಟೊರಿಕ್ಷಾದಲ್ಲಿಯೇ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡುರುವ ಇಬ್ಬರು ಯುವಕರಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೊಕ್ಸೊ) ಎಫ್‌ಟಿಎಸ್‌ಸಿ-1 ನ್ಯಾಯಾಲಯದ ನ್ಯಾಯಾಧೀಶ ಡಿ.ವಿನಯ್ ಅವರು ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದ್ದಾರೆ.

ಬೆಳ್ತಂಗಡಿ ತಾಲೂಕು ಇಳಂತಿಲ ನಿವಾಸಿ ಬೀಡಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಅಬ್ದುಲ್ ಕರೀಂ (39) ಮತ್ತು ಮೊಗ್ರು ಗ್ರಾಮದ ಪಚ್ಚಡ್ಕ ನಿವಾಸಿ ಆಟೊರಿಕ್ಷಾ ಚಾಲಕ ಸಾದಿಕ್ (34) ಶಿಕ್ಷೆಗೊಳಗಾದ ಆರೋಪಿಗಳು.

2023ರ ಜೂ.18ರಂದು ಪರಿಶಿಷ್ಟ ಜಾತಿಗೆ ಸೇರಿದ ಅಪ್ರಾಪ್ತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘದ ಹಣ ಕಟ್ಟಲು ಬಂದಾರು ಗ್ರಾಮದ ನೇಲೊಳ್ದ ಪಲ್ಕೆ ಎಂಬಲ್ಲಿಗೆ ಹೋಗುತ್ತಿದ್ದಳು. ಈ ವೇಳೆ ಆರೋಪಿ ಅಬ್ದುಲ್ ಕರೀಂ ಮತ್ತು ಸಾದಿಕ್ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಬಂಟ್ವಾಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರತಾಪ್‌ಸಿಂಗ್ ಥೋರಾಟ್ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ ವಿಚಾರಣೆ ನಡೆದು ಆರೋಪಿಗಳು ತಪ್ಪಿತಸ್ಥರೆಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಒಂದನೇ ಆರೋಪಿ ಅಬ್ದುಲ್ ಕರೀಂಗೆ ಪೊಕ್ಸೊ ಕಾಯ್ದೆಯ ಕಲಂ 8ರಡಿ 5ವರ್ಷಗಳ ಸಾದಾ ಸಜೆ ಮತ್ತು 5,000 ರೂ. ದಂಡ, ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 6 ತಿಂಗಳ ಸಾದಾ ಸಜೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯ್ದೆಯ ಕಲಂ 3(1) (ಡಬ್ಲ್ಯು)(ಐ)ರಡಿ 5 ವರ್ಷ ಸಾದಾ ಸಜೆ ಮತ್ತು 5,000 ರೂ.ದಂಡ, ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 6 ತಿಂಗಳ ಸಜೆ ವಿಧಿಸಿದ್ದಾರೆ. ಅಲ್ಲದೆ ಪರಿಶಿಷ್ಟ ಜಾತಿ, ಪಂಗಡದವರ ದೌರ್ಜನ್ಯ ತಡೆ ಕಾಯಿದೆಯ ಕಲಂ 3(2)(ವಿಎ) ಮತ್ತು ಐಪಿಸಿ ಕಲಂ 354ಎ(1)(ಐ)ರಡಿ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 5,000 ರೂ. ದಂಡ, ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 3 ತಿಂಗಳ ಕಠಿನ ಸಜೆ ವಿಧಿಸಿದ್ದಾರೆ.

ಇನ್ನೋರ್ವ ಆರೋಪಿ ಸಾದಿಕ್‌ಗೆ ಪೊಕ್ಸೊ ಕಾಯ್ದೆಯ ಕಲಂ 8ರಡಿ 3 ವರ್ಷಗಳ ಸಾದಾ ಸಜೆ ಮತ್ತು 5,000 ರೂ. ದಂಡ, ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 6 ತಿಂಗಳ ಸಜೆ ವಿಧಿಸಿದ್ದಾರೆ.

ಪ್ರಾಸಿಕ್ಯೂಷನ್ ಪರವಾಗಿ ಈ ಹಿಂದಿನ ವಿಶೇಷ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ್ ಸಾಕ್ಷಿಗಳ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು. ಬಳಿಕ ವಿಶೇಷ ಸರಕಾರಿ ಅಭಿಯೋಜಕಿ ಸಹನಾ ದೇವಿ ಬೋಳೂರು ವಾದ ಮಂಡಿಸಿದ್ದರು.

Edited By : Abhishek Kamoji
PublicNext

PublicNext

10/12/2024 05:59 pm

Cinque Terre

17.26 K

Cinque Terre

0

ಸಂಬಂಧಿತ ಸುದ್ದಿ