ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಶ್ರೀ ಕ್ಷೇತ್ರ ಹಳುವಳ್ಳಿ ಸುಬ್ರಹ್ಮಣ್ಯೇಶ್ವರ ಮಹಾ ರಥೋತ್ಸವವು ಪ್ರತಿವರ್ಷದಂತೆ ಈ ಬಾರಿಯೂ ಅದ್ದೂರಿಯಿಂದ ನೆರವೇರಿದೆ. ರಥೋತ್ಸವದ ಪ್ರಯುಕ್ತ ಗಣಪತಿ ಹೋಮ, ದಿಂಡಿ ಉತ್ಸವದ ಮೂಲಕ ಧಾರ್ಮಿಕ ವಿಧಿಗಳು ಆರಂಭಗೊಂಡಿದ್ದವು. ಬೆಳಿಗ್ಗೆಯಿಂದಲೇ ದೇಗುಲದ ಸುತ್ತಲೂ ಭಕ್ತರ ದಂಡು ನೆರೆದು ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ವಿವಿಧ ಬಗೆಯ ಹರಕೆ ಹೇಳಿಕೊಳ್ಳುವವರು ಮತ್ತು ಹಿಂದಿನ ವರ್ಷಗಳ ಬಯಕೆಗಳು ತೀರಿದ ಹಿನ್ನೆಲೆಯಲ್ಲಿ ಹರಕೆ ಒಪ್ಪಿಸಲು ರಾಜ್ಯದ ವಿವಿಧೆಡೆಯಿಂದ ಭಕ್ತರು ಬಂದಿದ್ದರು. ದೇವಸ್ಥಾನದಲ್ಲಿ ಪಂಚಕಜ್ಜಾಯ ಸಮರ್ಪಣೆ, ಸಹಸ್ರನಾಮಾರ್ಚನೆ, ಅನ್ನಸಂತರ್ಪಣೆ ನೆರವೇರಿತು. ಮಂಗಳವಾದ್ಯದ ಜೊತೆಗೆ ದೇವರ ಉತ್ಸವ ಮೂರ್ತಿಗಳನ್ನು ದೇಗುಲದ ಸುತ್ತಲೂ ಪ್ರದಕ್ಷಿಣೆಯಲ್ಲಿ ಕರೆದೊಯ್ಯಲಾಯಿತು. ಬಳಿಕ, ಮಹಾಗಣಪತಿ ಮತ್ತು ಸುಬ್ರಹ್ಮಣ್ಯ ಸ್ವಾಮಿಯ ಉತ್ಸವ ಮೂರ್ತಿಗಳ ರಥಾರೋಹಣ ನಡೆಯಿತು. ಈ ಸಂದರ್ಭ ಭಕ್ತರು ಹರ್ಷೋದ್ಗಾರ ಮಾಡಿದರು. ನಂತರ, ರಥವನ್ನು ಗ್ರಾಮದ ರಥಬೀದಿಯಲ್ಲಿ ಎಳೆಯಲಾಯಿತು. ಅಯ್ಯಪ್ಪ ಸ್ವಾಮಿ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಕಂಡು ಬಂದರು.
Kshetra Samachara
10/12/2024 02:40 pm