ಶಿವಮೊಗ್ಗ: ಒಳ ಮೀಸಲಾತಿ ಜಾರಿ ವಿರೋಧಿಸಿ ಜಿಲ್ಲಾ ಬಂಜಾರ ಸಮಾಜ, ಬಂಜಾರ ಧರ್ಮಗುರುಗಳ ಮಹಾಸಭಾ ಹಾಗೂ ಜಿಲ್ಲೆಯ ಬಂಜಾರ ಸಮಾಜದ ಸಂಘ ಸಂಸ್ಥೆಗಳ ಸಂಯುಕ್ತ ಸಹಯೋಗದಲ್ಲಿ ಇಂದು ಬಂಜಾರ ಸಮಾಜದವರು ಪ್ರತಿಭಟನೆ ನಡೆಸಿದ್ದಾರೆ.
ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದ ಬಂಜಾರರು, ಒಳ ಮೀಸಲಾತಿಯನ್ನು ಜಾರಿ ಮಾಡಲು ಸರ್ಕಾರ ಹೊರಟಿದೆ. ಇದು ಬಂಜಾರ ಸಮುದಾಯಕ್ಕೆ ಕೊಡಲಿ ಪೆಟ್ಟು ನೀಡಲಿದೆ ಎಂದು ದೂರಿದ್ದಾರೆ. ಯಾವುದೇ ಕಾರಣಕ್ಕೂ ಇದು ಜಾರಿಯಾಗಬಾರದು. ಬಂಜಾರ ಸಮಾಜದವರು ಎಚ್ಚೆತ್ತುಕೊಳ್ಳಬೇಕಾಗಿದೆ. ಆದ್ದರಿಂದ ಜನ ಜಾಗೃತಿ ಅಭಿಯಾನದ ಮೂಲಕ ಸರ್ಕಾರಕ್ಕೆ ನಾವು ಒಳ ಮೀಸಲಾತಿ ಜಾರಿ ಮಾಡದಂತೆ ಒತ್ತಾಯಿಸುತ್ತಿದ್ದೇವೆ.
ಒಳ ಮೀಸಲಾತಿ ಜಾರಿಯಾಗುವುದರಿಂದ ವಿದ್ಯಾರ್ಥಿ ವೇತನ, ಉದ್ಯೋಗ ಸಿಗುವುದಿಲ್ಲ. ನಮ್ಮ ಸಮಾಜದ ನೌಕರ ವರ್ಗದವರಿಗೆ ಬಡ್ತಿಯೂ ಸಿಗುವುದಿಲ್ಲ. ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಸ್ಥಗಿತಗೊಳ್ಳುತ್ತದೆ. ಇದು ನಮ್ಮ ಸಮುದಾಯಕ್ಕೆ ಮಾರಕವಾಗಿದೆ. ಇದರ ಹಿಂದೆ ಒಳ ಮೀಸಲಾತಿ ಜಾರಿಗೊಳಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಒಳ ಮೀಸಲಾತಿ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆದಿಲ್ಲ. ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಗೊಳಿಸಲು ತಂದ ಮಸೂದೆಯನ್ನು ರಾಜ್ಯ ಸರ್ಕಾರ ಅಂಗೀಕರಿಸಬೇಕಾಗಿದೆ. ಆದ್ದರಿಂದ ಸೂಕ್ತ ಅಧ್ಯಯನ ಇಲ್ಲದೇ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಜಾರಿಗೊಳಿಸಲು ನಡೆಯುತ್ತಿರುವ ಹುನ್ನಾರಗಳು ನಿಲ್ಲಬೇಕು. ಕೂಡಲೇ ಕರ್ನಾಟಕ ತಾಂಡಾ ನಿಗಮ ಸ್ಥಾಪಿಸಿ ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
PublicNext
09/12/2024 08:05 pm