ಶಿವಮೊಗ್ಗ : ಗೋವಿಂದಾಪುರ, ಗೋಪಿಶೆಟ್ಟಿ ಕೊಪ್ಪ ಆಶ್ರಯ ಬಡಾವಣೆಗಳಲ್ಲಿ ಯಾವುದೇ ಮೂಲ ಸೌಲಭ್ಯ ಕಲ್ಪಿಸದೇ ಮನೆ ವಿತರಿಸಲು ಶಾಸಕರು ಹೊರಟಿದ್ದು, ಸರಿಯಲ್ಲ ಇದು ಬಡವರಿಗೆ ಮಾಡುತ್ತಿರುವ ಅನ್ಯಾಯ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಆರೋಪಿಸಿದ್ದಾರೆ.
ಮನೆಗಳ ಹಂಚಿಕೆಗೆ ಸಂಬಂಧಿಸಿದಂತೆ, ಕುವೆಂಪು ರಂಗಮಂದಿರದಲ್ಲಿ ಬಿಜೆಪಿ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಇಲ್ಲಿ ಶಿಷ್ಟಾಚಾರವನ್ನು ಕೂಡ ಅವರು ಮರೆತಿದ್ದಾರೆ. ಶಿಷ್ಟಾಚಾರದ ಪ್ರಕಾರ ಸಚಿವ ಮಧು ಬಂಗಾರಪ್ಪ ಹಾಗೂ ಜಮೀರ್ ಅಹಮ್ಮದ್ ಅವರನ್ನು ಸಭೆಗೆ ಕರೆಯಬೇಕಿತ್ತು. ಅವರನ್ನು ಆಹ್ವಾನಿಸಿಯೂ ಇಲ್ಲ. ಅವರಿಗೆ ಹೇಳಿಯೂ ಇಲ್ಲ ಎಂದು ದೂರಿದ್ದಾರೆ.
ಇಷ್ಟಾದರೂ ಶಾಸಕರು ನಮಗೆ ಹಕ್ಕುಚ್ಯುತಿ ಉಲ್ಲಂಘನೆಯಾಗಿದೆ ಎಂದು ಹೇಳುತ್ತಿದ್ದಾರೆ. ಸಚಿವ ಮಧು ಬಂಗಾರಪ್ಪ ಅವರು ವಸತಿ ಸಚಿವ ಜಮೀರ್ ಅಹಮ್ಮದ್ ಅವರೊಂದಿಗೆ ಮಾತನಾಡಿ ಸದ್ಯಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಲು 15 ಕೋಟಿ ರೂ. ಕೊಡಿಸಲು ಮುಂದಾಗಿದ್ದರು.
ಆದರೆ, ಸೌಜನ್ಯಕ್ಕೂ ಅವರನ್ನು ಕರೆಯದೇ ಶಾಸಕ ಚನ್ನಬಸಪ್ಪ ಅವರು ಫಲಾನುಭವಿಗಳನ್ನು ಆಯ್ಕೆ ಮಾಡಲು ಮುಂದಾಗಿರುವುದು ಹಕ್ಕುಚ್ಯುತಿ ಉಲ್ಲಂಘನೆಯಾಗಿದೆ ಎಂದು ತಿರುಗೇಟು ನೀಡಿದರು.
ಚನ್ನಬಸಪ್ಪ ಅವರು ಮಾಜಿ ಶಾಸಕ ಕೆ.ಎಸ್. ಈಶ್ವರಪ್ಪ ಅವರೊಂದಿಗೆ ಸ್ಪರ್ಧೆಗೆ ಬಿದ್ದಂತೆ ಕಾಣುತ್ತಿದೆ. ಹಾಗಾಗಿ ಅವಸರದಲ್ಲಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ತಮ್ಮ ಬೆಂಬಲಿಗರಿಗೆ ಮನೆಗಳನ್ನು ಕೊಡಿಸಲು ಆಯುಕ್ತರ ಮೇಲೆ ಒತ್ತಡ ಹಾಕಿ ಅಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದಿದ್ದರೂ ಏಕಾಏಕಿ ಮನೆಗಳ ಹಂಚಿಕೆ ಸಭೆ ಏರ್ಪಡಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು ಇವರಿಗೆ ಲೆಕ್ಕಕ್ಕೇ ಇಲ್ಲದಂತಾಗಿದೆ ಎಂದು ದೂರಿದ್ದಾರೆ.
PublicNext
09/12/2024 07:43 pm