ತುಮಕೂರು: ಪೈಪ್‌ಲೈನ್ ಮೂಲಕ ಕುಣಿಗಲ್, ಮಾಗಡಿ ತಾಲ್ಲೂಕಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಮಿತ್ರ ಪಕ್ಷಗಳ ಹೋರಾಟ ಮುಂದುವರೆದಿದ್ದು, ಸೋಮವಾರ ಎರಡೂ ಪಕ್ಷಗಳ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.
ಗುಬ್ಬಿ ತಾಲ್ಲೂಕು ಸಾಗರನಹಳ್ಳಿ ಹೇಮಾವತಿ ನಾಲಾ ಗೇಟ್ ಬಳಿದಿಂದ ತುಮಕೂರುವರೆಗೆ ವಿವಿಧ ಮಠಾಧೀಶರು, ಶಾಸಕರು, ಮಾಜಿ ಶಾಸಕರು, ಎರಡೂ ಪಕ್ಷಗಳ ಮುಖಂಡರು, ರೈತರು ಪಾದಯಾತ್ರೆ ನಡೆಸಿದ್ದರು. ಈಗ ಧರಣಿ ಸತ್ಯಾಗ್ರಹ ಆರಂಭಿಸಿ ಹೋರಾಟ ತೀವ್ರಗೊಳಿಸಿದ್ದಾರೆ. ನಗರದ ವಕೀಲರು ಹೇಮಾವತಿ ನೀರಿನ ಹೋರಾಟ ಬೆಂಬಲಿಸಿ ಸೋಮವಾರ ನ್ಯಾಯಾಲಯದ ಕಲಾಪದಿಂದ ದೂರ ಉಳಿದು ಬಂದು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡರು.
ವಕೀಲರ ಸಂಘದ ಉಪಾಧ್ಯಕ್ಷ ಶಿವಶಂಕರ್, ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ, ಖಜಾಂಚಿ ಕೆ.ಎಲ್.ಭಾರತಿ, ಬಿಜೆಪಿ ವಕೀಲ ಪ್ರಕೋಷ್ಟದ ಹಿಮಾನಂದ್, ಕುಮಾರಸ್ವಾಮಿ ಹಾಗೂ ಹಲವು ವಕೀಲರು ಹೋರಾಟದಲ್ಲಿ ಭಾಗವಹಿಸಿ, ಹೇಮಾವತಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಜಿಲ್ಲೆಯ ಜನರಿಗೆ ಅನ್ಯಾಯ ಮಾಡುತ್ತಿದೆ. ಸರ್ಕಾರ ಕೂಡಲೇ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ಕಾಮಗಾರಿಯನ್ನು ಸ್ಥಗಿತಗೊಳಿಸಿಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಮಾತನಾಡಿ, ಜಿಲ್ಲೆಯ ರೈತರ ಬದುಕಿಗೆ ಮರಣ ಶಾಸನವಾಗಲಿರುವ ಹಾಗೂ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಸಲಿರುವ ಅವೈಜ್ಞಾನಿಕ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆಯನ್ನು ಸರ್ಕಾರ ಸ್ಥಗಿತಗೊಳಿಸಬೇಕು. ಜಿಲ್ಲೆಯ ಜನರ, ರೈತರಿಗೆ ದ್ರೋಹ ಮಾಡಿ ನಮ್ಮ ನೀರಿನ ಹಕ್ಕನ್ನು ಕಸಿಯುವ ಪ್ರಯತ್ನವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಹಾಲಿ ಇರುವ ನಾಲೆಯ ಮೂಲಕ ಕುಣಿಗಲ್‌ಗೆ ಹೇಮಾವತಿ ನೀರು ತೆಗೆದುಕೊಂಡುಹೋಗಲು ಅಭ್ಯಂತರವಿಲ್ಲ, ಆದರೆ, ನೀರನ್ನು ಕಬಳಿಸುವ ಹುನ್ನಾರದ ಪೈಪ್‌ಲೈನ್ ಮೂಲಕ ನೀರನ್ನು ತೆಗೆದುಕೊಂಡುಹೋಗಲು ಬಿಡುವುದಿಲ್ಲ, ಎಕ್ಸ್ಪ್ರೆಸ್ ಕೆನಾಲ್ ಯೋಜನೆ ಕೈಬಿಡುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದರಾಮಯ್ಯ, ಮುಖಂಡರಾದ ಗುಬ್ಬಿ ನಂಜೇಗೌಡ, ಸಾಗರನಹಳ್ಳಿ ವಿಜಯಕುಮಾರ್, ಚಂದ್ರಶೇಖರ ಬಾಬು, ಟಿ.ಹೆಚ್.ಹನುಮಂತರಾಜು, ಬಾವಿಕಟ್ಟೆ ನಾಗಣ್ಣ, ಹೆಚ್.ಎಂ.ರವೀಶಯ್ಯ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುಮಿತ್ರಮ್ಮ, ಜ್ಯೋತಿ ತಿಪ್ಪೇಸ್ವಾಮಿ, ಲತಾಬಾಬು, ಕೆ.ಪಿ.ಮಹೇಶ್, ಜೆಡಿಎಸ್ ಜಿಲ್ಲಾ ಓಬಿಸಿ ಘಟಕ ಅಧ್ಯಕ್ಷ ಯೋಗಾನಂದಕುಮಾರ್, ಸೇವಾದಳ ಜಿಲ್ಲಾಧ್ಯಕ್ಷ ಕೆಂಪರಾಜು, ಲೋಕೇಶ್ ಕಳ್ಳಿಪಾಳ್ಯ, ಮುಖಂಡರಾದ ಲಕ್ಷ್ಮೀನರಸಿಂಹರಾಜು, ಬನಶಂಕರಿಬಾಬು, ಕೆ.ಪಿ.ಮಮತ, ತಾಹೇರಾ ಕುಲ್ಸಂ, ವಿಜಯ, ಗಾಯತ್ರಿ, ವರಲಕ್ಷಿö್ಮ, ಉದಯಲಕ್ಷ್ಮೀ ,ಶಿವಕುಮಾರ್, ಹನುಮಂತರಾಜು ಮೊದಲಾದವರು ಧರಣಿಯಲ್ಲಿ ಭಾಗವಹಿಸಿದ್ದರು.
ಮಂಗಳವಾರದ ಧರಣಿ ಸತ್ಯಾಗ್ರಹದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಬೆಂಬಲ ನೀಡಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ತಿಳಿಸಿದರು.
PublicNext
09/12/2024 05:50 pm