ಕೋಲಾರ : ಕ್ಷಯರೋಗ (ಟಿಬಿ) ಮುಕ್ತ ಜಿಲ್ಲೆಗಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿರುವ ‘ನೂರು ದಿನಗಳ ಜಾಗೃತಿ ಅಭಿಯಾನ’ಕ್ಕೆ ಇಂದು ಚಾಲನೆ ನೀಡಲಾಯಿತು. ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ನಡೆದ ‘ಆರೋಗ್ಯದ ಬಗ್ಗೆ ಇರಲಿ ಗಮನ- ಟಿಬಿ ಮುಕ್ತ ಭಾರತ ಅಭಿಯಾನ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಟಿಬಿಯ ಪರಿಣಾಮ, ತಡೆಗಟ್ಟುವುದು, ಲಭ್ಯವಿರುವ ಚಿಕಿತ್ಸೆ ಮೊದಲಾದವುಗಳನ್ನು ತಿಳಿಸಿಕೊಡಲಾಯಿತು. ಮುಂದಿನ 100 ದಿನಗಳಲ್ಲಿ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುವ ಶಪಥವನ್ನೂ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನೀಲ್ ಎಸ್. ಹೊಸಮನಿ ಅವರು ಮಾತನಾಡಿ, ‘ಜಿಲ್ಲೆಯನ್ನು ಕ್ಷಯರೋಗ ಮುಕ್ತಗೊಳಿಸಲು ಎರಡು ವರ್ಷಗಳಿಂದಲೂ ಸತತ ಪ್ರಯತ್ನ ಮಾಡುತ್ತಿದ್ದೇವೆ. ಆದರೂ ರೋಗಿಗಳು ಕಂಡು ಬರುತ್ತಿದ್ದಾರೆ. ಕೇಂದ್ರ ಸರ್ಕಾರದ ಸೂಚನೆಯಂತೆ ಮುಂದಿನ ನೂರು ದಿನಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಆರೋಗ್ಯ ಇಲಾಖೆಯೊಂದಿಗೆ ಸಂಬಂಧಿಸಿದ ಇಲಾಖೆಗಳು ಕೂಡ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು’ ಎಂದು ಸೂಚಿಸಿದರು.
Kshetra Samachara
07/12/2024 07:23 pm