ಸಾಗರ : ಸರ್ಕಾರಿ ಪದವಿಪೂರ್ವ ಕಾಲೇಜು ಅಭಿವೃದ್ದಿಗೆ 1.50 ಕೋಟಿ ರೂ. ಮಂಜೂರಾಗಿದೆ. ಐದು ನೂತನ ಕೊಠಡಿ ಜೊತೆಗೆ ಕಾಲೇಜಿಗೆ ಸುಣ್ಣಬಣ್ಣ ಹೊಡೆಸಿ ಸುಂದರಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಲೋಕೋಪಯೋಗಿ ಇಲಾಖೆ ವತಿಯಿಂದ 95 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ೫ ನೂತನ ಕೊಠಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 2600 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಪ್ರೌಢಶಾಲೆಯಲ್ಲೂ ಸಹ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಕೊಠಡಿ ಕೊರತೆ ಬಗ್ಗೆ ಸಾಕಷ್ಟು ದೂರುಗಳಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಮನವಿ ಮಾಡಿಕೊಂಡ ಮೇರೆಗೆ ಲೋಕೋಪಯೋಗಿ ಇಲಾಖೆಯಿಂದ ಹಣ ಬಿಡುಗಡೆಯಾಗಿದೆ. ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಲು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.
ಕ್ಷೇತ್ರವ್ಯಾಪ್ತಿಯಲ್ಲಿ ಗುಣಮಟ್ಟದ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶದಿಂದ ಶಾಲಾಕಾಲೇಜುಗಳ ಅಭಿವೃದ್ದಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಶಾಲಾಕಾಲೇಜುಗಳ ಕೊಠಡಿ ನಿರ್ಮಾಣದ ಜೊತೆಗೆ ಶೈಕ್ಷಣಿಕ ವಾತಾವರಣ ಸಹ ಉತ್ತಮಗೊಳಿಸಲಾಗುತ್ತಿದೆ. ಸಾರ್ವಜನಿಕರು ಸರ್ಕಾರಿ ಶಾಲಾಕಾಲೇಜಿಗೆ ತಮ್ಮ ಮಕ್ಕಳನ್ನು ಸೇರಿಸುವ ಮೂಲಕ ಶೈಕ್ಷಣಿಕ ಅಭಿವೃದ್ದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಬಿ.ಎ.ಇಂದೂಧರ್, ಪ್ರಾಚಾರ್ಯ ಕೆ.ಸಿ.ಸತ್ಯನಾರಾಯಣ, ಪ್ರಮುಖರಾದ ಪರಿಮಳ, ರವಿಕುಮಾರ್, ಭವ್ಯ, ಪ್ರಭಾವತಿ, ಸಲೀಂ ಅಹ್ಮದ್,ಕಲಸೆ ಚಂದ್ರಪ್ಪ, ಟಿ.ಪಿ.ರಮೇಶ್ ಇನ್ನಿತರರು ಹಾಜರಿದ್ದರು.
Kshetra Samachara
06/12/2024 03:30 pm