ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವರನಟಿ ಲೀಲಾವತಿ ಅಮ್ಮನವರ ಸ್ಮಾರಕ ಉದ್ಘಾಟನೆ- "ಭವ್ಯ ಮಂದಿರ ಬಲು ಸುಂದರ!"

ನೆಲಮಂಗಲ: ಇಂದು ನೆಲಮಂಗಲ ತಾಲ್ಲೂಕಿನ ಸೋಲದೇವನಹಳ್ಳಿಯಲ್ಲಿ ವರನಟಿ ಲೀಲಾವತಿ ಅಮ್ಮನವರ ಸ್ಮಾರಕ ಉದ್ಘಾಟನೆ ಮಾಡಲಾಯ್ತು. ಸಚಿವ ಕೆ.ಹೆಚ್.ಮುನಿಯಪ್ಪ ಮತ್ತು ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದ ಸ್ವಾಮೀಜಿ ಉದ್ಘಾಟಿಸಿದರು.

ಪುತ್ರ ವಿನೋದ್ ರಾಜ್ ದಂಪತಿ ನಿರ್ಮಲಾನಂದ ಶ್ರೀಗಳ ಪಾದ ಪೂಜೆ ನೆರವೇರಿಸಿ ಆಶೀರ್ವಾದ ಪಡೆದರು. ವರನಟಿ ಲೀಲಾವತಿ ಅವರು ನಮ್ಮನ್ನಗಲಿ ಒಂದು ವರ್ಷವಾಗ್ತಿದೆ. ಇನ್ನು 3 ದಿನಗಳು ಕಳೆದ್ರೆ ಒಂದು ವರ್ಷದ ಕಾರ್ಯ ಕೂಡ ಮಾಡಬೇಕಿದೆ. ಅದಕ್ಕೂ ಮುನ್ನವೇ ಅಂದುಕೊಂಡಂತೆ ಪುತ್ರ, ನಟ ವಿನೋದ್ ರಾಜ್ ತಾಯಿಯ ಸ್ಮಾರಕವಾಗಿ ಭವ್ಯ, ದಿವ್ಯವಾದ ಮಂದಿರವನ್ನು ಕಟ್ಟಿಸಿದ್ದಾರೆ.

ಇದು ನೋಡುಗರಿಗೆ ಸ್ಮಾರಕವಾದ್ರೆ, ವಿನೋದ್ ರಾಜ್ ಅವರಿಗೆ ಮಾತ್ರ ದೇಗುಲ. ಅಷ್ಟು ಅದ್ಭುತವಾಗಿದೆ. ವರನಟಿ ಅವರ ಸ್ಮಾರಕ ಅಭಿಮಾನಿಗಳನ್ನು ಸ್ವಾಗತಿಸುತ್ತೆ. ಮಂದಿರದ ಸುತ್ತಲೂ ದೀಪಾಲಂಕಾರ, ಲೀಲಾವತಿ ಅಮ್ಮನವರು ನಟಿಸಿ, ರಂಜಿಸಿದ ಸಿನಿಮಾಗಳ ಪ್ರಮುಖ ಫೋಟೊಗಳು ಸ್ಮಾರಕದ ಸುತ್ತಲಿನ ಗೋಡೆಗಳ ಮೇಲೆ ಹಾಕಲಾಗಿತ್ತು. 63ಕ್ಕೂ ಹೆಚ್ಚು ಫೋಟೊಗಳು ನೋಡುಗರನ್ನು ಬೆರಗುಗೊಳಿಸುತ್ತೆ. ವಿಶೇಷವಾದ ಮಾರ್ಬಲ್ಸ್ ಬಳಸಿ‌ ಸ್ಮಾರಕ ನಿರ್ಮಾಣ ಮಾಡಲಾಗಿದೆ.

ಸ್ಮಾರಕದ ಉದ್ಘಾಟನೆಗೆ ಸಾಕಷ್ಟು ಜನ ಅಗಮಿಸಿದ್ರು. ವಿಶೇಷವಾಗಿ ಸಿನಿಮಾ ರಂಗದ ಒಡನಾಡಿಗಳು, ಹಿರಿಯ ಕಲಾವಿದರಾದ ಲಕ್ಷ್ಮೀದೇವಮ್ಮ, ಉಮೇಶ್, ಬ್ಯಾಂಕ್ ಜನಾರ್ಧನ್, ಅಭಿಜಿತ್ ಕೀರ್ತಿರಾಜ್ ಮತ್ತವರ ಮಗ ಧರ್ಮ, ಲಕ್ಷ್ಮೀ ಭಟ್ ಸೇರಿದಂತೆ ಹಲವರು ಉದ್ಘಾಟನೆಗೆ ಬಂದಿದ್ದರು. ಇದೇ ವೇಳೆ ಲೀಲಾವತಿ ಅಮ್ಮನವರ ಹಾಗೂ ವಿನೋದ್ ರಾಜ್ ಅವರ ಸರಳ ಜೀವನ, ತಾಯಿ-ಮಗನ ಅವಿನಾಭಾವ ಸಂಬಂಧದ ಬಗ್ಗೆ ಹಾಡಿ ಹೊಗಳಿದ್ರು. ಭೇಟಿ ಕೊಟ್ಟ ಒಬ್ಬೊಬ್ಬರು ಒಂದು ರೀತಿ ಲೀಲಾವತಿ ಅಮ್ಮನವರನ್ನು ನೆನಪು ಮಾಡಿಕೊಂಡ್ರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹಿರಿಯ ಚಿತ್ರ ಕಲಾವಿದರಿಗೆ ವಿನೋದ್ ರಾಜ್ ಸನ್ಮಾನಿಸಿ, ಗೌರವಿಸಿದರು.

ಇನ್ನೂ ಇವತ್ತಿನ ಕಾರ್ಯಕ್ರಮದ ಬಗ್ಗೆ ವಿನೋದ್ ರಾಜ್ ಮಾತನಾಡಿ, ಕಾರ್ಯಕ್ರಮಕ್ಕೆ ಬಂದ ಎಲ್ಲರಿಗೂ ಧನ್ಯವಾದ ಹೇಳಿದ್ರು. ಸಹಕಾರ ಕೊಟ್ಟಿದ್ದಕ್ಕೆ ಸರ್ಕಾರಕ್ಕೆ, ಕಲಾವಿದರಿಗೆ ವಂದನೆ ತಿಳಿಸಿದ್ರು. ತಾಯಿಯನ್ನು ಅಗಲಿದ ಕ್ಷಣದಿಂದಲೂ ನಟ ವಿನೋದ್‌ ರಾಜ್ ಅವರ ನೆನಪಿನಲ್ಲೇ ಕಾಲ ಕಳೆಯುತ್ತಾ, ತಮ್ಮ ತೋಟದಲ್ಲಿಯೇ ಅಮ್ಮನ ಸ್ಮಾರಕವನ್ನು ಯಾರ ಸಹಾಯವೂ ಪಡೆಯದೆ 1 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಕಣ್ಮನ ಸೆಳೆಯುವ ಸುಂದರವಾದ ಸ್ಮಾರಕ ನಿರ್ಮಿಸಿದ್ದಾರೆ.

Edited By : Shivu K
PublicNext

PublicNext

06/12/2024 08:08 am

Cinque Terre

28.98 K

Cinque Terre

0