ಕೊಡಗು: ಸಾಮಾಜಿಕ ಜಾಲತಾಣದಲ್ಲಿ ವೀರ ಸೇನಾನಿಗಳಿಗೆ ಅವಹೇಳನ ಮಾಡಿದ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಡಿ.6ರಂದು ಮಡಿಕೇರಿಯಲ್ಲಿ ಶಾಂತಿಯುತ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಘಟಕದ ಅಧ್ಯಕ್ಷ ಕೊಟ್ಟುಕತ್ತಿರ ಪಿ.ಸೋಮಣ್ಣ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್.ತಿಮ್ಮಯ್ಯ ಅವರನ್ನು ಅಪಮಾನಿಸಿರುವ ಪ್ರಕರಣ ಒಂದು ಜನಾಂಗಕ್ಕೆ ಮಾತ್ರ ಸೀಮಿತವಾಗದೇ ಇಡೀ ರಾಷ್ಟ್ರಕ್ಕೆ ಹಾಗೂ ಮಾಜಿ ಸೈನಿಕರಿಗೆ ಮಾಡಿದ ಅವಮಾನವಾಗಿದೆ. ಇಬ್ಬರು ಮಹಾನ್ ಸೇನಾಧಿಕಾರಿಗಳು ಭಾರತೀಯ ಸೇನೆಗೆ ನೀಡಿದ ಕೊಡುಗೆಯನ್ನು ಮತ್ತು ರಕ್ಷಣಾ ಪಡೆಯಲ್ಲಿ ಸಲ್ಲಿಸಿದ ಸೇವೆಯನ್ನು ಸ್ಮರಿಸದೆ ಅಗೌರವ ತೋರಿರುವುದು ಮಾಜಿ ಸೈನಿಕರ ಮನಸ್ಸಿಗೆ ನೋವನ್ನುಂಟುಮಾಡಿದೆ ಎಂದರು.
Kshetra Samachara
05/12/2024 05:19 pm