ಚಿಕ್ಕಬಳ್ಳಾಪುರ : ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ದಾಕ್ಷಾಯಣಿ ಜೆ.ಎನ್. ಹಾಗೂ ಸಿಬ್ಬಂದಿ ಮೇಲೆ ಗಲಾಟೆ ಮಾಡಿ ವ್ಯಕ್ತಿಯೊಬ್ಬರು ಎಫ್ಐಆರ್ ಹಾಕಿಸಿಕೊಂಡಿದ್ದಾರೆ.
ಚಿಂತಾಮಣಿ ತಾಲ್ಲೂಕಿನ ಮುರುಗುಮಲ್ಲ ಗ್ರಾಮದವರಾದ ಸೈಯದ್ ಮಕ್ರಮ್ ಪಾಷ ತನ್ನ ಮಗಳನ್ನು ಹೊಟ್ಟೆ ನೋವಿನ ಕಾರಣಕ್ಕೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ದೊಡ್ಡ ಆಸ್ಪತ್ರೆಗೆ ರೆಫರ್ ಮಾಡಿದ್ದಾರೆ.
ಆದರೆ, ಆಂಬ್ಯುಲೆನ್ಸ್ ಗಳು ಬೇರೆ ರೋಗಿಗಳನ್ನು ಕರೆದುಕೊಂಡು ಹೋಗಿದ್ದರಿಂದ 108 ಆಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗಲು ಹೇಳಿದ್ದು, ಆಂಬ್ಯುಲೆನ್ಸ್ ಬರಲು ತಡವಾಗಿದ್ದರಿಂದ ರೋಗಿಯ ತಂದೆ ಸೈಯದ್ ಮಕ್ರಮ್ ಪಾಷ ಮತ್ತು ಇನ್ನೊಬ್ಬ ವ್ಯಕ್ತಿ ವಿನಾ ಕಾರಣ ಕರ್ತವ್ಯದ ಮೇಲಿದ್ದ ಡಾಕ್ಟರ್ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೊಡೆಯಲು ಮುಂದಾಗಿದ್ದಾರೆ.
ಆಗ ಡಿ ಗ್ರೂಪ್ ನೌಕರರಾದ ಶ್ರೀನಿವಾಸ್, ವೆಂಕಟೇಶಪ್ಪ ಮತ್ತು ವಾಹನ ಚಾಲಕ ಮಂಜುನಾಥ ರಕ್ಷಣೆಗೆ ಬಂದಿದ್ದು, ಅವರ ಮೇಲೆಯೂ ಸಹ ಗಲಾಟೆ ನಡೆಸಿದ್ದಾರೆ ಎಂದು ಚಿಂತಾಮಣಿ ನಗರ ಠಾಣೆಗೆ ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ. ಘಟನೆ ಕುರಿತು ಚಿಂತಾಮಣಿ ನಗರ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
PublicNext
05/12/2024 07:32 am