ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಡಿಸೆಂಬರ್ 7ರಿಂದ 10ರವರೆಗೆ ದಕ್ಷಿಣ ವಲಯ ಅಂತರ್ ವಿವಿ ಮಹಿಳಾ ಟೆನಿಸ್ ಹಾಗೂ ಡಿಸೆಂಬರ್ 13ರಿಂದ 16ರವರೆಗೆ ಅಖಿಲ ಭಾರತ ಅಂತರ್ ವಿವಿ ಮಹಿಳಾ ಟೆನಿಸ್ ಟೂರ್ನಿ ಗಳನ್ನು ಮಣಿಪಾಲದಲ್ಲಿ ಆಯೋಜಿಸಲಿದೆ ಎಂದು ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ತಿಳಿಸಿದ್ದಾರೆ. ಮಾಹೆಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಾ.ಬಲ್ಲಾಳ್, ದಕ್ಷಿಣ ವಲಯ ಮಹಿಳಾ ಟೆನಿಸ್ ಟೂರ್ನಿಯಲ್ಲಿ ದಕ್ಷಿಣ ವಲಯಕ್ಕೆ ಸೇರಿದ 38 ವಿವಿ ಮಹಿಳಾ ತಂಡಗಳು ಸ್ಪರ್ಧಿಸಿದರೆ, ಅಖಿಲ ಭಾರತ ಅಂತರ್ ವಿವಿ ಸ್ಪರ್ಧೆಯಲ್ಲಿ ದೇಶದ ನಾಲ್ಕು ವಲಯಗಳಿಂದ ಒಟ್ಟು 16 ತಂಡಗಳು ಸ್ಪರ್ಧಿಸಲಿವೆ ಎಂದರು.
ಈಗಾಗಲೇ ಉತ್ತರ ವಲಯ, ಪಶ್ಚಿಮ ವಲಯ ಹಾಗೂ ಪೂರ್ವ ವಲಯಗಳಿಂದ ತಲಾ ನಾಲ್ಕು ತಂಡಗಳು ಅಖಿಲ ಭಾರತ ಮಟ್ಟದಲ್ಲಿ ಸ್ಪರ್ಧಿಸಲು ಅರ್ಹತೆಯನ್ನು ಪಡೆದುಕೊಂಡಿದ್ದರೆ, ದಕ್ಷಿಣ ವಲಯದಿಂದ ಸ್ಪರ್ಧಿಸುವ ನಾಲ್ಕು ತಂಡಗಳ ಆಯ್ಕೆ ಡಿಸೆಂಬರ್. 7ರಿಂದ 19ರವರೆಗೆ ನಡೆಯುವ ದಕ್ಷಿಣ ವಲಯ ಅಂತರ್ ವಿವಿ ಟೂರ್ನಿಯಲ್ಲಿ ನಡೆಯಲಿದೆ ಎಂದರು.
ಮಣಿಪಾಲದಲ್ಲಿರುವ ಅತ್ಯಾಧುನಿಕ, ಅಂತಾರಾಷ್ಟ್ರೀಯ ಗುಣಮಟ್ಟದ ಆರು ಸಿಂಥೆಟಿಕ್ ಕೋರ್ಟ್‌ಗಳಲ್ಲಿ ಈ ಎರಡೂ ಟೂರ್ನಿಗಳ ಪಂದ್ಯಗಳು ನಡೆಯಲಿವೆ. ಮೆರಿನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಎಂಐಟಿಯ ಟೆನಿಸ್ ಕೋರ್ಟ್ ಹಾಗೂ ಕೆಎಂಸಿಯ ತಲಾ ಎರಡು ಕೋರ್ಟ್‌ಗಳಲ್ಲಿ ಈ ಎಲ್ಲಾ ಸ್ಪರ್ಧೆಗಳು ನಡೆಯಲಿವೆ ಎಂದು ಮಾಹೆಯ ಕ್ರೀಡಾ ಸಮಿತಿಯ ಕಾರ್ಯದರ್ಶಿ ಡಾ.ವಿನೋದ್ ನಾಯಕ್ ಮಾಹಿತಿ ನೀಡಿದರು.
Kshetra Samachara
04/12/2024 08:22 pm