ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ರಾಷ್ಟ್ರಪ್ರಶಸ್ತಿ ವಿಜೇತ ತುಳು ಸಿನಿಮಾದ ನಿರ್ಮಾಪಕನ ವಿರುದ್ಧ ವಂಚನೆ ಆರೋಪ ಎಫ್‌ಐಆರ್ ದಾಖಲು

ಬೆಂಗಳೂರು : ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾದ ನಿರ್ಮಾಪಕನ ವಿರುದ್ಧ ವಂಚನೆ ಆರೋಪದಡಿ ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ಮೂಲದ ಉದ್ಯಮಿ ವರದರಾಜ್.ಟಿ ಅವರಿಗೆ 9 ಕೋಟಿ ರೂ ವಂಚಿಸಿರುವ ಆರೋಪದಡಿ ತುಳುವಿನಲ್ಲಿ ಜೀಟಿಗೆ ಸಿನಿಮಾದ ನಿರ್ಮಾಪಕ ಅರುಣ್ ರೈ ಸೇರಿದಂತೆ ಆವರ ವಿರುದ್ಧ ಪ್ರಕರಣ ದಾಖಲಾಗಿದೆ.

ಗೇರುಬೀಜ ಸಂಸ್ಕರಣಾ ಘಟಕ ಹೊಂದಿದ್ದ ಉದ್ಯಮಿ ವರದರಾಜ್ ಅವರಿಗೆ ಕೋವಿಡ್ ಸಂದರ್ಭದಲ್ಲಿ 25 ಕೋಟಿ ರೂ ನಷ್ಟವಾಗಿತ್ತು. ಬೆಂಗಳೂರಿನ ತಾಜ್ ಹೋಟೆಲ್​ನಲ್ಲಿ ಅರುಣ್ ರೈ ಪರಿಚಯವಾಗಿತ್ತು. ನಂತರದ ದಿನಗಳಲ್ಲಿ ವರದರಾಜ್ ಅವರನ್ನ ಸಂಪರ್ಕಿಸಿದ್ದ ಅರುಣ್ ರೈ, 'ನೀವು ನನ್ನ ಉದ್ಯಮದಲ್ಲಿ ಹಣ ತೊಡಗಿಸಿದರೆ ನಿಮಗಾದ ನಷ್ಟದಿಂದ ಹೊರಬರಬಹುದು. ನಾನು ಕನ್ನಡದಲ್ಲಿ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ವೀರಕಂಬಳ ಹೆಸರಿನ ಸಿನಿಮಾ ನಿರ್ಮಾಣ ಮಾಡುತ್ತಿದ್ದು ಅದರ ಲಾಭಾಂಶದಲ್ಲಿ 60 ಲಕ್ಷ ರೂಪಾಯಿ ಕೊಡುತ್ತೇನೆ ಎಂದು ನಂಬಿಸಿದ್ದ. ವರದರಾಜ್ ಅವರನ್ನ ನಂಬಿಸಲು 'ತಾನು ದೆಹಲಿಯಲ್ಲಿ 400 ಕೋಟಿ ಹೂಡಿಕೆ ಮಾಡಿದ್ದೇನೆ. ತಮಿಳುನಾಡಿನ ದಿಂಡಿಗಲ್ ಕಾಳಿ ಸ್ವಾಮಿಯಿಂದ 50 ಕೋಟಿ ಹಣ ಬರಲಿಕ್ಕೆ ಇದೆ, ಪಳನಿ ದೇವಾಲಯದ ಟ್ರಸ್ಟ್‌ನಿಂದ ಸಾಲ ಕೊಡಿಸುತ್ತೇನೆ, ಜಾರ್ಖಂಡ್ ಸರ್ಕಾರದಿಂದ 50 ಕೋಟಿ ರೂ ಕೆಲಸದ ಬಿಲ್ ಬಾಕಿ ಇದೆ, ಮಂಗಳೂರಿನ ಗೋಡೌನ್‌ನಲ್ಲಿ 40 ಕೋಟಿ ಮೌಲ್ಯದಷ್ಟು ಗೋಡಂಬಿ ಇದೆ, ಅದನ್ನು 25 ಕೋಟಿಗೆ ಕೊಡುತ್ತೇನೆ ಎಂದು ಅರುಣ್ ರೈ ಹೇಳಿಕೊಂಡಿದ್ದ.ಅಷ್ಟೇ ಅಲ್ಲದೆ ಬೆಂಗಳೂರಿನ ಹಲವು ಕಂಪನಿಗಳು ಹಾಗೂ ಕಟ್ಟಡಗಳನ್ನ ತೋರಿಸಿ ಇದೆಲ್ಲವೂ ತನ್ನದೇ ಎಂದಿದ್ದ. ಎಚ್ಎಸ್ಆರ್ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ರಾಜಾಜಿನಗರ, ತುಮಕೂರು ಮೈಸೂರಿನ ಹಲವು ಕಡೆ ಕಚೇರಿಗಳಿಗೆ ಕರೆದೊಯ್ದು ಅವೆಲ್ಲವೂ ತನ್ನದೇ ಎಂದು ಹೇಳಿಕೊಂಡಿದ್ದ. ದುಬೈ, ಗಾಂಬಿಯಾ, ಘಾನ, ಉಜ್ಬೇಕಿಸ್ತಾನ್, ಮಲೇಷ್ಯಾಗಳಲ್ಲಿ ಅಂತರಾಷ್ಟ್ರೀಯ ವ್ಯವಹಾರವಿದೆ. ಸ್ಪೇಸ್ ಎಕ್ಸ್ ಕಂಪನಿಯ ಸಂಸ್ಥಾಪಕ ಎಲಾನ್ ಮಸ್ಕ್​ರ ಕೋ-ಆರ್ಡಿನೇಟರ್ ಸಹ ನನ್ನ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾನೆ ಎಂದು ಸುಳ್ಳಿನ ಮೇಲೆ ಸುಳ್ಳು ಹೇಳಿದ್ದ. ವ್ಯವಹಾರದಲ್ಲಿ ಆಗಿದ್ದ ನಷ್ಟದಿಂದ ಹೊರಬರಬಹುದು ಎಂದುಕೊಂಡು ಅರುಣ್ ರೈ ಹೇಳಿದ್ದ ಬಣ್ಣದ ಮಾತುಗಳನ್ನ ನಂಬಿದ್ದ ವರದರಾಜ್, ತಮ್ಮ ಆಪ್ತರು ಸೇರಿದಂತೆ ಹಲವು ಕಡೆಗಳಿಂದ ಸಾಲ ಮಾಡಿ ಸುಮಾರು 9 ಕೋಟಿ ಹಣವನ್ನ ಆತನ ಕಂಪನಿಗಳಿಗಾಗಿ‌ ಹೂಡಿಕೆ ಮಾಡಿದ್ದರು.

ಆದರೆ ಅರುಣ್ ರೈ ಮತ್ತು ಆತನ ಸಹಚರರು ನಕಲಿ ಕರಾರು ಪತ್ರಗಳನ್ನು ನೀಡಿದ್ದಾರೆ. ಹಾಗೂ ಲಾಭಾಂಶ ನೀಡುವುದಾಗಿ ವಂಚಿಸಿದ್ದಾರೆ ಎಂದು ವರದರಾಜ್ ದೂರಿದ್ದಾರೆ. ಅದರನ್ವಯ ನಿರ್ಮಾಪಕ ಅರುಣ್ ರೈ, ಆತನ ಸಹೋದರ ಅರ್ಜುನ್ ರೈ, ಶ್ರೀನಿವಾಸ್.ಕೆ.ಪಿ, ರಘು ಹಾಗೂ ಗೋವಿಂದಪ್ಪ ಎಂಬುವವರ ವಿರುದ್ದ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಕರಣ ತನಿಖೆ ನಡೆಸುತ್ತಿದ್ದು, ಆರೋಪಿತರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Edited By : Nagaraj Tulugeri
PublicNext

PublicNext

01/12/2024 06:10 pm

Cinque Terre

15.36 K

Cinque Terre

0

ಸಂಬಂಧಿತ ಸುದ್ದಿ