ಕಾಪು: ಕರಾವಳಿ ಪ್ರವಾಸೋದ್ಯಮ, ಹೊಸ ಮಾರಿಗುಡಿಯ ಜೀರ್ಣೋದ್ಧಾರ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಪ್ರಚಾರ ನಡೆಸಿ, ಉತ್ತರ ಭಾರತ ಸಹಿತವಾಗಿ ಮೇಘಾಲಯ, ಮಿಝೋರಾಂ, ಒಡಿಶಾ ಸಹಿತ 19 ರಾಜ್ಯಗಳಲ್ಲಿ ಪ್ರವಾಸ ಕೈಗೊಂಡು ಮರಳಿದ ಶಟರ್ ಬಾಕ್ಸ್ ಖ್ಯಾತಿಯ ಕಾಪು ಸಚಿನ್ ಶೆಟ್ಟಿ ಮತ್ತು ಅಭಿಷೇಕ್ ಶೆಟ್ಟಿ ತಂಡವನ್ನು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಸ್ವಾಗತಿಸಲಾಯಿತು.
ಕಾಪುವಿಗೆ ಆಗಮಿಸಿದ ಸಚಿನ್ ಶೆಟ್ಟಿ ಮತ್ತು ಅವರ ತಂಡವನ್ನು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಉಪಾಧ್ಯಕ್ಷ ಮಾಧವ ಆರ್. ಪಾಲನ್, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಯೋಗೀಶ್ ವಿ.ಶೆಟ್ಟಿ ಮೊದಲಾದವರು ಸ್ವಾಗತಿಸಿದರು. ಹೊಸ ಮಾರಿಗುಡಿ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ಶ್ರೀನಿವಾಸ ತಂತ್ರಿ ಅವರು ಶ್ರೀ ಮಾರಿಯಮ್ಮ ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ಪ್ರಸಾದ ನೀಡಿ ಗೌರವಿಸಿದರು.
ಈ ಸಂದರ್ಭ ಸಚಿನ್ ಶೆಟ್ಟಿ ಮಾತನಾಡಿ, ಕಳೆದ ಅಕ್ಟೋಬರ್ 5ರಂದು ಹೊಸ ಮಾರಿಗುಡಿಯಿಂದ ಹೊರಟು ಕರ್ನಾಟಕ, ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಮೇಘಾಲಯ, ತ್ರಿಪುರ, ಮಿಝೋರಾಂ, ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ ರಾಜ್ಯಗಳಿಗೆ ತೆರಳಿ ಈಶಾನ್ಯ ರಾಜ್ಯಗಳ ಅಧ್ಯಯನ ಪ್ರವಾಸ ಮಾಡಿ 53 ದಿನಗಳ ನಂತರ ಕಾಪುವಿಗೆ ಆಗಮಿಸಿದ್ದೇವೆ. ಕಾಪು ಹೊಸ ಮಾರಿಗುಡಿ ಜೀರ್ಣೋದ್ಧಾರದ ಬಗ್ಗೆ, ನವದುರ್ಗಾ ಲೇಖನ ಯಜ್ಞದ ಬಗ್ಗೆಯೂ ವಿವಿಧೆಡೆ ಮಾಹಿತಿ ನೀಡಿದ್ದು, 53 ದಿನಗಳ ಪ್ರವಾಸದಲ್ಲಿ 13 ಸಾವಿರಕ್ಕೂ ಅಧಿಕ ಕಿಲೋಮೀಟರ್ ಸಂಚರಿಸಿದ್ದೇವೆ ಎಂದರು.
PublicNext
29/11/2024 09:58 am