ಬೆಂಗಳೂರು: ರಾಜ್ಯದಲ್ಲಿ 3 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಗೆಲುವಿನ ಬೆನ್ನಲ್ಲೇ ರಾಜ್ಯ ಸರ್ಕಾರದಲ್ಲಿ ಸಂಪುಟ ಪುನರಾಚನೆ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಈ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಕೆಲವು ಸಚಿವರು ತ್ಯಾಗ ಮಾಡಬೇಕು ಎನ್ನುವ ಮೂಲಕ ಸಂಪುಟಕ್ಕೆ ಸರ್ಜರಿ ಮಾಡುವ ಸುಳಿವು ನೀಡಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಮಾತ್ರ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣ, ಅಬಕಾರಿ ಇಲಾಖೆಯಲ್ಲಿನ ಹಗರಣ ವಿಪಕ್ಷಗಳ ಬಾಯಿಗೆ ಆಹಾರವಾಗಿತ್ತು. ಹೀಗಿದ್ದರೂ ಹೈಕಮಾಂಡ್ ಉಪಚುನಾವಣೆ ಹಿನ್ನೆಲೆ ಸೈಲೆಂಟ್ ಆಗಿಯೇ ಇತ್ತು. ಈಗ ಕಳಕಿಂತರಿಗೆ ಬಿಸಿ ಮುಟ್ಟಿಸಲು ಸಂಪುಟ ಸರ್ಜರಿಗೆ ಕೈ ಹಾಕಿದೆ ಎಂದು ತಿಳಿದು ಬಂದಿದೆ. ಡಿಸೆಂಬರ್ 9 ರಿಂದ 20 ರವರೆಗೂ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು, ಈ ಅಧಿವೇಶನದ ಬಳಿಕ ಸಂಪುಟದಲ್ಲಿ ಬರೋಬ್ಬರಿ 15 ಸಚಿವರಿಗೆ ಕೊಕ್ ನೀಡಲು ನಿರ್ಧರಿಸಿದೆ ಎನ್ನಲಾಗಿದೆ. ಹೀಗಾಗಿ ಸಂಪುಟದ ಹಲವು ಮಂತ್ರಿಗಳ ಎದೆ ಬಡಿತ ಜೋರಾಗುವಂತೆ ಮಾಡಿದೆ.
ಕಾಂಗ್ರೆಸ್ ಸರ್ಕಾರ ಆಡಳಿಕ್ಕೆ ಬಂದು ಒಂದೂವರೆ ವರ್ಷಗಳಾಗಿವೆ. ಆಡಳಿತದ ಸಂದರ್ಭದಲ್ಲಿ ಹಲವು ಲೋಪದೋಷಗಳು ಕಂಡು ಬಂದಿರುವುದು ಸಾರ್ವಜನಿಕವಾಗಿ ಏನೂ ಹೊರತಲ್ಲ. ಇದಕ್ಕಾಗಿ ಕೆಲವರನ್ನ ಸಂಪುಟದಿಂದ ಕೈಬಿಟ್ಟು ಇನ್ನೂ ಕೆಲವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಅನ್ನೋ ಚರ್ಚೆಗಳು ಸದ್ಯಕ್ಕೆ ನಡೆಯುತ್ತಿವೆ. ಬೈರತಿ ಸುರೇಶ್, ಲಕ್ಷ್ಮೀ ಹೆಬ್ಬಾಳ್ಕರ್, ಕೆಎನ್ ರಾಜಣ್ಣ, ಮಧು ಬಂಗಾರಪ್ಪ, ಆರ್‌ಬಿ ತಿಮ್ಮಾಪುರ, ಶಿವಾನಂದ ಪಾಟೀಲ್, ಕೆಎಚ್ ಮುನಿಯಪ್ಪ, ರಹಿಮ್ ಖಾನ್, ಡಿ ಸುಧಾಕರ್, ಎಂಸಿ ಸುಧಾಕರ್, ಕೆ ವೆಂಕಟೇಶ್ ಸೇರಿ 15 ಸಚಿವರನ್ನು ಕೈ ಬಿಡಲು ಹೈಕಮಾಂಡ್ ನಿರ್ಧರಿಸಿದೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಶಿಕ್ಷಣ ಮಂತ್ರಿಯಾಗಿರುವ ಮಧು ಬಂಗಾರಪ್ಪ ಅವರಿಗೆ ಕೊಕ್ ಸಿಗಲಿದೆ. ಮಧು ಬಂಗಾರಪ್ಪ ಅವರ ಕೆಲಸ ತೃಪ್ತಿಕರವಾಗಿಲ್ಲ ಎಂದು ಹೇಳಲಾಗುತ್ತಿದೆ. ಸದಾ ವಿವಾದಾತ್ಮಕ ಹೇಳಿಕೆಗಳಿಂದ ಮಾತ್ರವೇ ಪ್ರಸಿದ್ಧಿ ಪಡೆಯುತ್ತಿರುವ ಇವರು ಪ್ರಾಥಮಿಕ ಶಿಕ್ಷಣ ಸಚಿವರಾಗಿ ಇವರಿಗೆ ಸರಿಯಾಗಿ ಕನ್ನಡ ಬರೋದಿಲ್ಲ ಎಂಬ ಆಪಾದನೆಗಳೂ ಇವೆ, ಅವರೂ ಬಹಿರಂಗವಾಗಿ ಇದನ್ನು ಒಪ್ಪಿಕೊಂಡಿದ್ದಾರೆ. ಈ ಎಲ್ಲಾ ಕಾರಣಗಳಿಗಾಗಿ ಅವರಿಗೆ ಸಂಪುಟದಿಂದ ಕೊಕ್ ನೀಡಬಹುದು ಎಂದು ಹೇಳಲಾಗಿದೆ.
ಎನ್ ಎಸ್ ಬೋಸರಾಜು ಅವರಿಗೆ ಸಣ್ಣ ನೀರಾವರಿ ಖಾತೆಯನ್ನೂ ಕೊಡಲಾಗಿತ್ತು. ಆದರೆ, ಆ ಖಾತೆಯನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ ಎಂಬ ಆರೋಪಗಳು ಇವರ ವಿರುದ್ಧ ಕೇಳಿಬಂದಿವೆ. ರಹೀಂ ಖಾನ್ ಅವರು, ಪ್ರಮಾಣ ವಚನ ಸ್ವೀಕರಿಸಿದಾಗ ಹಾಗೂ ವಿಧಾನಸಭೆಯ ಅಧಿವೇಶನವಿದ್ದಾಗ ಮಾತ್ರ ಕಾಣಸಿಗುತ್ತಾರೆ. ಇಲ್ಲವಾದರೆ ಅವರು ಕಾಂಗ್ರೆಸ್ ನಾಯಕರ ಕೈಗೇ ಸಿಗುವುದಿಲ್ಲ. ಈ ಎಲ್ಲಾ ಬೆಳವಣಿಗೆಗಳಿಂದ ಕೊಕ್‌ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನೂ ಡಿ. ಸುಧಾಕರ್ ಅವರು ತಮ್ಮ ಇಲಾಖೆಯ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಹಾಗಾಗಿ, ಅವರಿಗೆ ಕೊಕ್ ಸಿಗಬಹುದೆಂದು ಹೇಳಲಾಗುತ್ತಿದೆ. ಇತ್ತೀಚೆಗೆ ನಕಲಿ ಬಿಪಿಎಲ್ ಕಾರ್ಡ್ ಗಳ ರದ್ದತಿ ವೇಳೆ ಅವಸರದ ಹೆಜ್ಜೆಯಿಟ್ಟು ಅರ್ಹರ ಬಿಪಿಎಲ್ ಕಾರ್ಡ್ ಗಳೂ ರದ್ದಾಗುವಂತೆ ಮಾಡಿ ಅದರಿಂದ ಸರ್ಕಾರಕ್ಕೆ ಮುಜುಗರ ತಂದಿರುವುದನ್ನು ಕಾಂಗ್ರೆಸ್ ನಾಯಕರು ಗಮನಿಸಿದ್ದಾರೆ ಹೀಗಾಗಿ ಸಂಪುಟದಿಂದ ಕೈ ಬಿಡವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.
PublicNext
28/11/2024 09:04 pm