ಶಿಗ್ಗಾವಿ: ಕ್ಷೇತ್ರದ ಅಭಿವೃದ್ಧಿಗಾಗಿ ಮತ ಹಾಕಿದ ಮತದಾರರ ನಂಬಿಕೆಯ ಆಶಾಭಾವನೆಗಳನ್ನು ಈಡೇರಿಸುವ ಹೊಣೆಗಾರಿಕೆ ನನ್ನದಾಗಿದ್ದು, ಗ್ರಾಮೀಣ ಪ್ರದೇಶದ ಸಣ್ಣಪುಟ್ಟ ಸಮಸ್ಯೆಗಳನ್ನು ಅತೀ ಜರೂರಾಗಿ ಪೂರೈಸಬೇಕಿದೆ ಎಂದು ನೂತನ ಶಾಸಕ ಯಾಸೀರ ಖಾನ್ ಪಠಾಣ್ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಮಾತನಾಡಿದ ಅವರು, ತುರ್ತಾಗಿ ಸಭೆ ಕರೆದ ಉದ್ದೇಶ ಅಧಿಕಾರಿಗಳ ಪರಿಚಯ ಹಾಗೂ ಉತ್ತರ ಕರ್ನಾಟಕ ಅಧಿವೇಶನ ಡಿಸೆಂಬರ್ 9 ರಂದು ಪ್ರಾರಂಭವಾಗುವ ಕಾರಣ ಸಾಮಾನ್ಯ ಜನರಿಗೆ ಇರುವಂತಹ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ತಾಲೂಕಿನ ವಿವಿಧ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಸರಕಾರಿ ಕಚೇರಿಗಳಿಗೆ ಬಂದಂತಹ ಜನ ಸಾಮಾನ್ಯರಿಗೆ ಗೌರವ ನೀಡಿ, ಸಾರ್ವಜನಿಕರಿಗೆ ಅಧಿಕಾರಿಗಳು ಭೇಟಿ ಸಮಯ ನಿಗದಿಪಡಿಸಬೇಕು. ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಜನಸಾಮಾನ್ಯರಿಗೆ ಸರ್ಕಾರ ನೀಡುವ ವೃದ್ಧಾಪ್ಯ ವೇತನ ಅರ್ಜಿ ಸಲ್ಲಿಸಿದವರಿಗೆ 72 ಗಂಟೆಯೊಳಗೆ ಪೂರ್ಣಗೊಳಿಸಬೇಕು. ಅಂಗವಿಕಲರ ವೇತನ ಬರಬೇಕು. ಅಕ್ರಮ ಸಕ್ರಮ ಭೂ ನ್ಯಾಯ ಮಂಡಳಿ ಫಲಾನುಭವಿಗಳಿಗೆ ಪರಿಹಾರ ಒದಗಿಸಬೇಕು ಎಂದರು.
ಬಂಕಾಪೂರ, ಶಿಗ್ಗಾಂವ ಪುರಸಭೆ ಬಿ ಶಿವಪ್ಪ ಹಾಗೂ ಮಲ್ಲಪ್ಪ ಮುಖ್ಯಾಧಿಕಾರಿಗಳಿಗೆ ವಾರ್ಡ್ಗಳಲ್ಲಿ ಶ್ರೀಮಂತರು ಇರುವ ಕಡೆ ಮಾತ್ರ ಹೆಚ್ಚು ಸ್ವಚ್ಚತೆ ಮಾಡುವಿರಿ, ಜನಸಾಮಾನ್ಯರ ಇರುವ ಕಡೆ ಪರಿಸರ ಸ್ವಚ್ಚತೆ ಇರುವುದಿಲ್ಲ. ಆದ್ದರಿಂದ ಸ್ವಚ್ಚತೆಗೆ ಆದ್ಯತೆ ನೀಡಿರಿ ಹಾಗೂ ತ್ಯಾಜ್ಯ ವಿಲೇವಾರಿ ವಾಹನ ಸಮರ್ಪಕವಾಗಿ ನಿರ್ವಹಿಸಿ ಕ್ರಮ ಕೈಗೊಳ್ಳಲು ಸೂಚಿಸಿದರು.
PublicNext
28/11/2024 04:54 pm