ಸಾಕು ಪ್ರಾಣಿಗಳಲ್ಲಿ ಸಾಕಷ್ಟು ಜನರಿಗೆ ಇಷ್ಟವಾಗುವ ಪ್ರಾಣಿ ಅಂದ್ರೆ ಅದು ಶ್ವಾನ. ನಿಯತ್ತಿಗೆ ಹೆಸರಾದ ಶ್ವಾನವನ್ನು ತಮ್ಮ ಮನೆಯ ಮಗನಂತೆ ಸಾಕುವವರೇ ಹೆಚ್ಚು. ಅದರೊಂದಿಗಿನ ಬಾಂಧವ್ಯ, ಪ್ರೀತಿಯನ್ನು ಮಗನಂತೆ ಸಾಕಿದವರಿಗೆ ಥಟ್ಟನೆ ಅರ್ಥವಾಗುತ್ತದೆ. ಹೆಚ್ಚಿನವರು ತಮ್ಮ ಸಾಕು ನಾಯಿಗಳನ್ನು ಮಕ್ಕಳಂತೆ ಕಣ್ಣಲ್ಲಿ ಕಣ್ಣಿಟ್ಟು ಸಾಕುತ್ತಾರೆ. ಹೀಗೆ ಪ್ರೀತಿಯಿಂದ ಹಾಗೂ ಮುದ್ದಾಗಿ ಸಾಕಿದ ಶ್ವಾನವನ್ನು ಕಳೆದುಕೊಂಡಾಗ ಆಗುವ ನೋವು ಅಷ್ಟಿಷ್ಟಲ್ಲ. ಹೀಗೆ ತಮಿಳುನಾಡಿನ ಕುಟುಂಬವೊಂದು ತಮ್ಮ ಮುದ್ದಿನ ಶ್ವಾನದ ಅಗಲಿಯಿಂದ ಕಣ್ಣೀರಿಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೊಯಮತ್ತೂರಿನ ಗೌಂಡಂಪಳಯಂದಲ್ಲಿ ಶರತ್ ಎಂಬುವರ ಕುಟುಂಬವು ಮದುವೆಗೆ ಹೋಗುತ್ತಿದ್ದರಿಂದ ತಮ್ಮ ಶ್ವಾನವನ್ನು ಪಶು ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದರು. ಆದರೆ ಅವರು ವಾಪಸ್ ಬರುವಷ್ಟರಲ್ಲೇ ಶ್ವಾನವು ಇಹಲೋಕ ತ್ಯಜಿಸಿತ್ತು. ಇದನ್ನು ಕಂಡ ಕುಟುಂಬಸ್ಥರು ಕಣ್ಣೀರಿಟ್ಟು ಪ್ರೀತಿಯ ಮಗನಿಗೆ ಭಾವುಕ ವಿದಾಯ ಹೇಳಿದ್ದಾರೆ.
ಶ್ವಾನ ಹೇಗೆ ಸಾವನ್ನಪ್ಪಿತ್ತು ಎಂಬುದರ ಬಗ್ಗೆ ಪಶು ಆಸ್ಪತ್ರೆಯವರು ಯಾವುದೇ ಮಾಹಿತಿಯನ್ನು ನೀಡಿಲ್ಲ. ಹೀಗಾಗಿ ಆಸ್ಪತ್ರೆಯ ವಿರುದ್ಧ ಶ್ವಾನ ಕಳೆದುಕೊಂಡ ಕುಟುಂಬಸ್ಥರು ಕೊಯಮತ್ತೂರಿನ ಸಾಯಿಬಾಬಾ ಕಾಲೋನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
PublicNext
27/11/2024 04:13 pm