ಧಾರವಾಡ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಯ ಕರ್ನಾಟಕ ಸಂಘಟನೆ ವತಿಯಿಂದ ಶನಿವಾರ ಧಾರವಾಡದಲ್ಲಿ ಕನ್ನಡಿಗರ ಹಬ್ಬ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಧಾರವಾಡದ ಕರ್ನಾಟಕ ಕಾಲೇಜು ಮುಂಭಾಗದಲ್ಲಿ ಮಧ್ಯಾಹ್ನ ಕನ್ನಡ ನಾಡು, ನುಡಿ ಕುರಿತಾಗಿ ಅನೇಕ ಕಾರ್ಯಕ್ರಮಗಳು ನಡೆದವು. ಕನ್ನಡಿಗರ ಹಬ್ಬ, ತಾಯಿ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಿದರು.
ಮಧ್ಯಾಹ್ನದ ನಂತರ ಕೆಸಿಡಿ ಕಾಲೇಜಿನಿಂದ ತಾಯಿ ಭುವನೇಶ್ವರಿ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಮಹಿಳಾ ಡೊಳ್ಳು ಕುಣಿತದವರು ಒಂದೆಡೆಯಾದರೆ ಮತ್ತೊಂದೆಡೆ ಕನ್ನಡ ನಾಡು, ನುಡಿ ಕುರಿತಾದ ಹಾಡುಗಳ ಡಿಜೆ ಸೌಂಡಿಗೆ ಯುವಕರು ಹುಚ್ಚೆದ್ದು ಕುಣಿದರು. ಅಲ್ಲಿಂದ ಆರಂಭವಾದ ಮೆರವಣಿಗೆ ಕೆಸಿಡಿ ವೃತ್ತ, ಸುಭಾಷ ರಸ್ತೆ ಮೂಲಕ ಬಂದು ಭೂಸಪ್ಪ ಸರ್ಕಲ್‌ಗೆ ಬಂದು ಮುಕ್ತಾಯಗೊಂಡಿತು.
ಜಯ ಕರ್ನಾಟಕ ಸಂಘಟನೆ ಜಿಲ್ಲಾ ಅಧ್ಯಕ್ಷ ಸುಧೀರ ಮುಧೋಳ ಅವರ ಅಧ್ಯಕ್ಷತೆಯಲ್ಲಿ ನೂರಾರು ಜನ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಸೇರಿಕೊಂಡು ಆಯೋಜಿಸಿದ್ದ ಈ ಕನ್ನಡಿಗರ ಹಬ್ಬ ಅದ್ಧೂರಿಯಾಗಿ ನಡೆಯಿತು. ಡಿಜೆ ಹಾಡಿನ ಮೂಲಕ ಧಾರವಾಡದ ಪ್ರಮುಖ ರಸ್ತೆಗಳಲ್ಲಿ ಕನ್ನಡದ ಕಂಪು ಹರಡುವಂತಾಯಿತು. ಈ ಮೆರವಣಿಗೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಸಹ ಮಾಡಲಾಗಿತ್ತು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/11/2024 07:55 pm