ಹುಬ್ಬಳ್ಳಿ: ನಮ್ಮ ಅಪೇಕ್ಷೆಗಳು ಯಾವುದೇ ರೀತಿಯಲ್ಲಿ ಈಡೇರುತ್ತಿಲ್ಲ. ನಮ್ಮ ವೈಯಕ್ತಿಕ ಹಾಗೂ ನಮ್ಮ ಕ್ಷೇತ್ರದ ಬಗ್ಗೆ ಸರ್ಕಾರ ಬೆಂಬಲ ನೀಡಿದೆ. ಆದರೆ, ನಮ್ಮ ಸಮಾಜಕ್ಕೆ ರಾಜ್ಯ ಸರ್ಕಾರದಿಂದ ಯಾವುದೇ ರೀತಿಯಲ್ಲಿ ಉಪಯೋಗವಾಗಿಲ್ಲ. ನಮ್ಮ ಸಮಾಜದ ಬಗ್ಗೆ ಸಾಕಷ್ಟು ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ನಿಟ್ಟಿನಲ್ಲಿ ಚಳಿಗಾಲದ ಅಧಿವೇಶನದ ವೇಳೆ ಹೋರಾಟ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ವರೂರು ನವಗ್ರಹ ತೀರ್ಥ ಕ್ಷೇತ್ರದ ಗುಣಧರ ನಂದಿ ಮಹಾರಾಜರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಾವು ಜೈನ್ ಅಭಿವೃದ್ಧಿ ನಿಗಮ ಸ್ಥಾಪನೆಗೆ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಚಿವರು ಭರವಸೆ ನೀಡಿ ಒಂದೂವರೆ ವರ್ಷವಾಗಿದೆ. ಆದರೆ, ಜೈನ ಸಮುದಾಯದ ಅಭಿವೃದ್ಧಿ ನಿಗಮ ಆಗಿಲ್ಲ. ವಿಧಾನಸಭೆಯಲ್ಲಿ ಚರ್ಚೆ ಮಾಡಲು ಕೇಳಿದರೇ ಕೇವಲ ಭರವಸೆ ನೀಡುತ್ತಾರೆ ವಿನಃ ಯಾವುದೇ ರೀತಿಯಲ್ಲಿ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದರು.
ಅಹಿಂದ ಸಮಾಜವಾಗಿರುವ ಜೈನರಿಗೆ ರಾಜ್ಯ ಸರ್ಕಾರದಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಜೈನ್ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ದೊರೆಯುತ್ತಿಲ್ಲ. 100ಕ್ಕೆ ನೂರರಷ್ಟು ಸಾಕ್ಷರತೆ ಇರುವ ನಮ್ಮ ಸಮುದಾಯದ ಬಗ್ಗೆ ರಾಜ್ಯ ಸರ್ಕಾರ ಸಾಕಷ್ಟು ನಿರ್ಲಕ್ಷ್ಯ ತೋರುತ್ತಿದೆ. ಈ ನಿಟ್ಟಿನಲ್ಲಿ ಚಳಿಗಾಲ ಅಧಿವೇಶನದಲ್ಲಿ ಬಸ್ತವಾಡದಿಂದ ಪ್ರತಿಭಟನೆ ಮೆರವಣಿಗೆ ಆರಂಭ ಮಾಡಿ ಸುವರ್ಣಸೌಧದ ಮುಂದೆ ಧರಣಿ ನಡೆಸುವ ಮೂಲಕ ಸರ್ಕಾರವನ್ನು ಎಚ್ಚರಿಸುವ ಕಾರ್ಯವನ್ನು ಮಾಡಲಾಗುತ್ತದೆ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/11/2024 05:22 pm