ಶಿವಮೊಗ್ಗ: ಸಾರ್ವಜನಿಕರಿಂದ ಅನೇಕ ದೂರುಗಳು ಬಂದ ಹಿನ್ನಲೆಯಲ್ಲಿ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ವಿವಿಧ ವಿಭಾಗಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಿಪಿಎಲ್ ಕಾರ್ಡುದಾರರಿಗೆ ಉಚಿತ ಚಿಕಿತ್ಸೆ ನೀಡಬೇಕಾಗಿರುವುದು ಆಸ್ಪತ್ರೆ ಕರ್ತವ್ಯವಾಗಿದೆ. ಆದರೆ, ಹಣ ಪಡೆಯುತ್ತಿರುವ ಸಂಗತಿ ಗಮನಕ್ಕೆ ಬಂದಿದೆ. ಈ ಕುರಿತು ಹಣ ಪಡೆಯುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಆಸ್ಪತ್ರೆಯ ಸ್ಕ್ಯಾನಿಂಗ್ ವಿಭಾಗದಲ್ಲಿ ಆಗುತ್ತಿರುವ ವಿಳಂಬದ ಕುರಿತು ನನ್ನ ಗಮನಕ್ಕೆ ಬಂದಿದ್ದು, ಇದನ್ನು ಕೂಡಲೇ ಸರಿಪಡಿಸಬೇಕು. ಆಸ್ಪತ್ರೆಯ ಮೆಡಿಕಲ್ ಸ್ಟೋರ್ ನಲ್ಲಿ ಹಲವಾರು ಔಷಧಿಗಳ ಅಲಭ್ಯತೆ ಬಗ್ಗೆ ದೂರುಗಳು ಬಂದಿವೆ ಎಂದರು.
ಆಸ್ಪತ್ರೆಯ ಔಷಧಿ ಉಗ್ರಾಣಕ್ಕೂ ಭೇಟಿ ನೀಡಿ, ಹಲವಾರು ಸಮಸ್ಯೆಗಳನ್ನು ಕಣ್ಣಾರೆ ಕಂಡ ಅವರು, ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು. ರಾಜ್ಯ ಸರ್ಕಾರ ಬಡವರನ್ನೇ ಬಗ್ಗುಬಡಿಯುವ ಕಾರ್ಯ ಮಾಡುತ್ತಿದೆ. ಗ್ಯಾರಂಟಿಯ ಯೋಜನೆಗೆ ಹಣ ಜೋಡಿಸಲು ಬಡವರಿಂದಲೇ ಹಣ ಕಿತ್ತುಕೊಳ್ಳುತ್ತಿದೆ. ರೋಗಿಗಳ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ. ಜೀವನಾವಶ್ಯಕ ಔಷಧಿಗಳೇ ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿಲ್ಲದಿದ್ದರೆ ಬಡ ರೋಗಿಗಳ ಕಥೆ ಏನಾಗಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಜಿಲ್ಲಾ ಅಧೀಕ್ಷಕ ಮತ್ತು ಸಿಮ್ಸ್ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು.
ಇನ್ನು ಮುಂದೆ ಈ ರೀತಿಯ ಅವ್ಯವಸ್ಥೆಯಾಗಬಾರದು. ರಕ್ತ ಪರೀಕ್ಷೆ ಸೇರಿದಂತೆ ತುರ್ತು ಅವಶ್ಯಕ ಮೆಡಿಸಿನ್‍ಗಳು ಹಾಗೂ ಎಲ್ಲಾ ಸೌಲಭ್ಯಗಳು ರೋಗಿಗಳಿಗೆ ಸಿಗುವಂತೆ ಮಾಡಲು ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
PublicNext
23/11/2024 09:57 am