ಸಾಗರ: ಬೆಂಗಳೂರಿನ ಬಿಡದಿಯಿಂದ ಸಾಗರಕ್ಕೆ ಆಗಮಿಸಿ ಒಂಟಿ ಮನೆಯಲ್ಲಿ ವಾಸವಿದ್ದ ಮಹಿಳೆಯನ್ನು ಬೆದರಿಸಿ ಬಂಗಾರದ ಮಾಂಗಲ್ಯ ಸರ ದರೋಡೆ ಮಾಡಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಸಾಗರ ಗ್ರಾಮಾಂತರ ಪೊಲೀಸರು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಕಲ್ಮನೆ ಗ್ರಾಮದ ಕುಂಬಾರಗುಂಡಿಯಿಂದ ಸುಮಾರು 500 ಮೀಟರ್ ದೂರದಲ್ಲಿರುವ ಒಂಟಿ ಮನೆಯಲ್ಲಿದ್ದ ಮಹಿಳೆಗೆ ಅಪರಿಚಿತ ವ್ಯಕ್ತಿ ಚಾಕು ತೋರಿಸಿ, ಮಹಿಳೆಯನ್ನು ರೂಂನಲ್ಲಿ ಲಾಕ್ ಮಾಡಿ ಬಂಗಾರದ ಮಾಂಗಲ್ಯ ಸರ, ಮೊಬೈಲ್ ಹಾಗೂ ಪರ್ಸ್ ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂದು ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸ್ ಇಲಾಖೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಐಪಿಎಸ್, 1ನೇ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮಾ ರೆಡ್ಡಿ, 2ನೇ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪರವರ ಮಾರ್ಗದರ್ಶನದಲ್ಲಿ ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ಟಿ. ನಾಯ್ಕ್ ಸಾರಥ್ಯದಲ್ಲಿ ಸಾಗರ ಗ್ರಾಮಾಂತರ ಠಾಣಾ ಇನ್ಸ್ಪೆಕ್ಟರ್ ಮಹಾಬಲೇಶ್ವರ ಎಸ್.ಎನ್., ಸಿಬ್ಬಂದಿ ಶೇಖ್ ಫೈರೋಜ್ ಅಹ್ಮದ್, ಸನಾವುಲ್ಲಾ, ರವಿಕುಮಾರ್, ಹನುಮಂತ ಜಂಬೂರ್, ನಂದೀಶ್, ಪ್ರವೀಣ್ ಕುಮಾರ್, ಜೀಪ್ ಚಾಲಕ ಗಿರೀಶ್ ಬಾಬು ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ಸಿಬ್ಬಂದಿ ಗುರುರಾಜ, ಇಂದ್ರೇಶ್ ಹಾಗೂ ವಿಜಯ್ ಕುಮಾರ್ ರವರು ಒಳಗೊಂಡ ವಿಶೇಷ ತಂಡ ರಚಿಸಿ ಬೆಂಗಳೂರಿನ ಬಿಡದಿಯ ಟೊಯೋಟೊ ಕಂಪೆನಿಯಲ್ಲಿ ಮೆಷಿನ್ ಆಪರೇಟರ್ ಕೆಲಸ ಮಾಡುತ್ತಿದ್ದ ಮಂಡ್ಯ ಜಿಲ್ಲೆಯ ಪಾಂಡವಾಪುರ ತಾಲೂಕಿನ ಗ್ರಾಮ ನಿವಾಸಿ 26 ವರ್ಷದ ಪವನ್ ಎಚ್.ಎಸ್. ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಯನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆರೋಪ ಸಾಬೀತಾದ ನಂತರ ಕೃತ್ಯಕ್ಕೆ ಬಳಸಿದ ಚಾಕು ಹಾಗೂ ಕಪ್ಪು ಬಣ್ಣದ ಪರ್ಸನ್ನು ಪಡೆದು ಮಹಿಳೆಯ ಕುತ್ತಿಗೆಯಿಂದ ಕಿತ್ತುಕೊಂಡು ಹೋಗಿದ 39 ಗ್ರಾಂ 94 ಮಿಲಿ ಗ್ರಾಂ ತೂಕದ 2,78,231/ರೂ. ಮೌಲ್ಯದ ಮಾಂಗಲ್ಯ ಸರವನ್ನು ರಾಮನಗರ ಜಿಲ್ಲೆಯ ಬಿಡದಿಯ ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ನಲ್ಲಿ ಅಮಾನತ್ತು ಪಡಿಸಿಕೊಂಡು ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿಯ ಪತ್ತೆ ಹಾಗೂ ಕಿತ್ತುಕೊಂಡು ಹೋದ ಮಾಂಗಲ್ಯ ಸರ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಐಪಿಎಸ್ ಅಭಿನಂದನೆ ಸಲ್ಲಿಸಿದ್ದಾರೆ.
ವರದಿ: ಜಮೀಲ್ ಸಾಗರ್ (ಪಬ್ಲಿಕ್ ನೆಕ್ಸ್ಟ್ ಸಾಗರ)
PublicNext
23/11/2024 07:54 am