ಹುಬ್ಬಳ್ಳಿ : ತಂದೆ ತಾಯಿಯನ್ನು ಕಳೆದುಕೊಂಡು, ಪಾಲಕರಿಂದ ದೂರಾದ ಮಕ್ಕಳು, ಸಮಾಜದಲ್ಲಿ ಭಿಕ್ಷಾಟನೆ ಮತ್ತು ಬಾಲಕಾರ್ಮಿಕ ಪದ್ಧತಿಯಡಿ ಸಂಕಷ್ಟಕ್ಕೆ ಒಳಗಾದ ಮಕ್ಕಳ ಏಳಿಗೆ ಮತ್ತು ರಕ್ಷಣೆಗಾಗಿ ಪಣತೊಟ್ಟ ಉತ್ತರಾಖಂಡ ರಾಜ್ಯದ ಪಿಥೋರಘಡದ ಅಜಯ್ ಓಲಿ ಅವರು, ಒಂದು ಹೊಸ ಯೋಜನೆ ಮಾಡುವ ಮೂಲಕ ಅನಾಥರ ಬೆನ್ನೆಲುಬಾಗಿ ನಿಂತಿದ್ದಾರೆ. ಅದೇನು ಅಂತೀರಾ ಸ್ಟೋರಿ ನೋಡಿ.
ಹೌದು,,, ಉತ್ತರಾಖಂಡ ರಾಜ್ಯದ ಪಿಥೋರಘಡದ ಅಜಯ್ ಓಲಿ ಅವರು 10 ವರ್ಷಗಳಿಂದ ಬರಿಗಾಲಿನಲ್ಲಿ ನಡೆದು ಯಾವುದೇ ಪ್ರಚಾರ ಹಾಗೂ ಇನ್ನೊಬ್ಬರ ಸಹಾಯ ಇಲ್ಲದೇ ಸ್ವತಃ ಹೋರಾಟ ಜಾಗೃತಿ ಮೂಡಿಸುವ ಸಮಾಜಮುಖಿ ಕೆಲಸದಲ್ಲಿ ತೊಡಗಿದ್ದಾರೆ. ಮಾನವ ಸಂಪನ್ಮೂಲ ಸ್ನಾತಕೋತ್ತರ ಪದವೀಧರರಾದ ಅಜಯ್ ಅವರು ಶ್ರೀಮಂತ ಕುಟುಂಬ ಹಿನ್ನೆಲೆಯುಳ್ಳವರಾಗಿದ್ದು, ತಂದೆ ನಿವೃತ್ತ ಯೋಧರು. ಪತ್ನಿ ಚಂದ್ರಾ ಓಲಿ ವಕೀಲರು. ದತ್ತು ಪಡೆದ ಮಗು 11 ತಿಂಗಳಿಗೆ ಮೃತಪಟ್ಟ ಕಾರಣ ಅನಾಥ, ಭಿಕ್ಷಾಟನೆ, ಬಾಲಕಾರ್ಮಿಕ ಮಕ್ಕಳ ರಕ್ಷಣೆಗೆ ಪಣತೊಟ್ಟರು. ಮಕ್ಕಳ ಶಿಕ್ಷಣ ಮತ್ತು ಏಳ್ಗೆಗೆಂದೇ 2015ರಲ್ಲಿ ಘನಶ್ಯಾಮ್ ಓಲಿ ಚೈಲ್ಡ್ ವೆಲ್ ಫೇರ್ ಸೊಸೈಟಿ ಎಂಬ ಸ್ವಯಂಸೇವಾ ಸಂಸ್ಥೆ ಆರಂಭಿಸಿದರು. ಕೊಳೆಗೇರಿ ಪ್ರದೇಶ ಹಾಗೂ ಅಲೆಮಾರಿಗಳು ವಾಸಿಸುವ ಪ್ರದೇಶಗಳಿಗೆ ಭೇಟಿ ನೀಡಿ, ಮಕ್ಕಳನ್ನು ದುಡಿಮೆ ಮತ್ತು ಭಿಕ್ಷಾಟನೆಗೆ ದೂಡದೆ, ಶಿಕ್ಷಣ ಕೊಡಿಸುವಂತೆ ಅರಿವು ಮೂಡಿಸುತ್ತಿದ್ದಾರೆ. ಅವರಿಗೆ ಸ್ವಂತ ಹಣದಲ್ಲಿ ಕಲಿಕಾ ಸಾಮಗ್ರಿ ಒದಗಿಸಿ, ಶಿಕ್ಷಣ ಪಡೆಯಲು ಪ್ರೇರೇಪಿಸುತ್ತಿದ್ದಾರೆ.
35ನೇ ಅಭಿಯಾನದ ಪ್ರಯುಕ್ತ ಮೊದಲ ಬಾರಿಗೆ ಕರ್ನಾಟಕದ ವಿಜಯಪುರ, ಧಾರವಾಡ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಂಗಳೂರು, ಮೈಸೂರು ಜಿಲ್ಲೆಗಳಲ್ಲಿ ಅಭಿಯಾನ ನಡೆಸಿದ್ದಾರೆ. ಎಜ್ಯುಕೇಷನ್ ಆನ್ ವೀಲ್ಸ್ ಯೋಜನೆ ಮೂಲಕ ಚಲಿಸುವ ಶಾಲೆಯ ಪರಿಕಲ್ಪನೆ ಪರಿಚಯಿಸಿದ್ದು, ಕೊಳೆಗೇರಿ ಪ್ರದೇಶ ಹಾಗೂ ಅಲೆಮಾರಿ ಜನಾಂಗದ ಮಕ್ಕಳಿಗೆ ಸ್ಥಳದಲ್ಲೇ ಶಿಕ್ಷಣ ಒದಗಿಸುವ ಕಾರ್ಯ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಧಾರವಾಡ ಬಂಟರ ಸಂಘದ ಆರ್‌ಎನ್‌ಎಸ್ ವಿದ್ಯಾ ನಿಕೇತನ ಶಾಲೆಯ ಸಹಯೋಗದಲ್ಲಿ, ಕೊಳೆಗೇರಿ ಸ್ಥಳಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ. ಜಾಗೃತಿ ಅಭಿಯಾನದ ಮೂಲಕ ಈವರೆಗೂ ದೇಶಾದ್ಯಂತ 17 ಸಾವಿರಕ್ಕೂ ಅಧಿಕ ಮಕ್ಕಳನ್ನು ಬಾಲಕಾರ್ಮಿಕ ಪದ್ಧತಿ ಮತ್ತು ಭಿಕ್ಷಾಟನೆಯಿಂದ ಮುಕ್ತಗೊಳಿಸಿದ್ದಾರೆ.
ಇನ್ನು ಇವರ ಸಮಾಜಮುಖಿ ಕಾರ್ಯವನ್ನು ಮೆಚ್ಚಿ 2019ರಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದೆ. ಅಲ್ಲದೆ, 2021ರಲ್ಲಿ ಭಾರತ ಸರ್ಕಾರದ ರಾಷ್ಟ್ರೀಯ ಯುವ ಪುರಸ್ಕಾರಕ್ಕೂ ಅವರು ಪಾತ್ರರಾಗಿದ್ದಾರೆ. ಇವರ ಒಂದು ಮಹತ್ತರ ಕಾರ್ಯಕ್ಕೆ ಹುಬ್ಬಳ್ಳಿ ಜನರು ಶುಭ ಹಾರೈಸಿದ್ದಾರೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/11/2024 03:07 pm