ಪುತ್ತೂರು: ಮದುವೆ ಸಮಾರಂಭಕ್ಕೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಷ್ಟೊಂದು ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಬಸ್ಸಿಗೆ ಢಿಕ್ಕಿಯಾಗುವುದನ್ನು ತಪ್ಪಿಸಲು ಯತ್ನಿಸಿ ರಸ್ತೆಯ ಅಂಚಿನಲ್ಲಿದ್ದ ಮನೆಯೊಂದಕ್ಕೆ ನುಗ್ಗಿದ ಘಟನೆ ಗುರುವಾರ ಮಾಣಿ ಮೈಸೂರು ರಾ.ಹೆ.ಯ ಪುತ್ತೂರು ತಾಲೂಕಿನ ಕಾವು ಸಮೀಪದ ಆಮ್ಚಿನಡ್ಕ ಎಂಬಲ್ಲಿ ನಡೆದಿದೆ.
ಸುಳ್ಯದಿಂದ ಪೆರ್ಲಂಪಾಡಿ ಕಡೆಗೆ ತೆರಳುತ್ತಿದ್ದ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ಸು ಆಮ್ಚಿನಡ್ಕದಲ್ಲಿ ತಿರುವು ಪಡೆದುಕೊಳ್ಳುತ್ತಿದ್ದ ಸಂದರ್ಭ ಪುತ್ತೂರಿನಿಂದ ಸುಳ್ಯದ ಕಡೆಗೆ ಮದುವೆಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಪರಸ್ಪರ ತೀರಾ ಅಪಾಯಕಾರಿಯಾಗಿ ಮುಖಾಮುಖಿಯಾಗಿತ್ತು.
ಈ ಸಂದರ್ಭದಲ್ಲಿ ಶಾಲಾ ಬಸ್ಸಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಖಾಸಗಿ ಬಸ್ಸಿನ ಚಾಲಕ ತನ್ನ ಬಸ್ಸನ್ನು ರಸ್ತೆಯ ಇನ್ನೊಂದು ಬದಿಗೆ ತಿರುಗಿಸಿದ್ದು ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಅಂಚಿನಲ್ಲಿದ್ದ ಮನೆಗೆ ನುಗ್ಗಿ ಮನೆಯ ಗೋಡೆಗೆ ಢಿಕ್ಕಿ ಹೊಡೆದಿದೆ. ಮನೆಯ ಗೋಡೆ ಮತ್ತು ಮಾಡು ಭಾಗಶ: ಕುಸಿದು ಬಿದ್ದಿದೆ. ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ. ಇದರಿಂದಾಗಿ ಯಾವುದೇ ಅಪಾಯಗಳು ಸಂಭವಿಸಿಲ್ಲ. ಬಸ್ಸಿನಲ್ಲಿದ್ದವರಿಗೆ ಸಣ್ಣಪುಟ್ಟ ತರಚು ಗಾಯಗಳಾಗಿದೆ.
ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಬಸ್ಸಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಿದ ಚಾಲಕನ ಸಮಯ ಪ್ರಜ್ಞೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
Kshetra Samachara
22/11/2024 08:35 am