ಭಟ್ಕಳ : ಮುರುಡೇಶ್ವರದಲ್ಲಿ ಮತ್ಸ್ಯ ಮೇಳವನ್ನು ಅಲಂಕಾರಿಕ ಮೀನುಗಳನ್ನು ಅಕ್ವೇರಿಯಂಗೆ ತುಂಬುವ ಮೂಲಕ ಮತ್ಸ್ಯ ಮೇಳವನ್ನು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಉದ್ಘಾಟಿಸಿದರು. ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ನಂದಿನಿ ಹಾಲು ಪ್ರಚಾರಕ್ಕೆ ಸಿಎಂ ಸಿದ್ದರಾಮಯ್ಯ ಅವರು ದೆಹಲಿಗೆ ಹೋಗಿದ್ದಾರೆ. ಕರಾವಳಿಯಲ್ಲಿ ಮೀನು ಪ್ರಚಾರ ಮಾಡಲೆಂದು ನಾನು ಮುರುಡೇಶ್ವರಕ್ಕೆ ಬಂದಿದ್ದೇನೆ.
ಮೀನುಗಾರರು ನೀರಿನಲ್ಲಿ, ಸಮುದ್ರದಲ್ಲಿ ಮೀನು ಕೃಷಿ ಮಾಡ್ತಾರೆ. ಮೀನುಗಾರರಿಗೆ ಯಾವುದೇ ಲಂಚ, ಪ್ರಮೋಷನ್ ಇಲ್ಲ. ಸೂರ್ಯ, ಬೆಳಕು, ನೀರನ್ನು ನಂಬಿಕೊಂಡು ಇಡೀ ಸಮಾಜಕ್ಕೆ ಸಹಾಯ ಮಾಡ್ತಿದ್ದಾರೆ. ಮೀನುಗಾರರು ಸ್ವಂತಕ್ಕೇನೂ ಮಾಡ್ತಿಲ್ಲ, ಯಾವ ಮೀನುಗಾರನೂ ಕೋಟ್ಯಾಂತರ ಹಣ ಸಂಪಾದಿಸಿರೋದು ನಾನು ನೋಡಿಲ್ಲ. ಮೀನುಗಾರರ ಬದುಕು ಹಸಿರು ಮಾಡಬೇಕೆನ್ನುವುದು ನನ್ನ ಆಸೆಯಾಗಿದೆ. ಮೀನುಗಾರರ ಸಂಕಷ್ಟಕ್ಕೆ ಪರಿಹಾರವನ್ನು 10 ಲಕ್ಷ ರೂ.ಗೆ ಹೆಚ್ಚಿಸಲು ಸರಕಾರ ನಿರ್ಧರಿಸಿದೆ.
ಜಿಲ್ಲೆಯಲ್ಲಿ ಹಲವು ಬಂದರುಗಳು ನಿರ್ಮಾಣವಾಗಬೇಕು. ಯುವಕರು ಇಲ್ಲಿ ಕೋಮುಗಲಭೆಗಳಲ್ಲಿ ತೊಡಗಿದ್ರು, ಅದನ್ನು ನಾವು ತಪ್ಪಿಸ್ತೇವೆ. ಯುವಕರ ಉತ್ತಮ ಬದುಕು ಸೃಷ್ಠಿಗಾಗಿ ಒಳ್ಳೆಯ ಅವಕಾಶ ಕಲ್ಪಿಸ್ತೇವೆ. ಕರಾವಳಿಗೆ ಪ್ರವಾಸೋದ್ಯಮ ನೀತಿ ಜಾರಿ ತರಲು ನಿರ್ಧರಿಸಿದ್ದೇವೆ. ಕರಾವಳಿಯಲ್ಲಿ ಅಭಿವೃದ್ಧಿ ಹಾಗೂ ದೊಡ್ಡ ಉದ್ಯಮ ಬೆಳೆಸಲು ಯೋಚನೆಯಿದೆ. ಬಂದರು ನಿರ್ಮಾಣದಿಂದ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಮತ್ತಷ್ಟು ಶಕ್ತಿ ಸಿಗುತ್ತದೆ ಎಂದು ತಿಳಿಸಿದ್ದಾರೆ.
ಮೀನುಗಾರರ ಅಭಿವೃದ್ಧಿಗೆ ನಮ್ಮ ಸರಕಾರ ಬದ್ಧವಾಗಿದೆ. 40 ಕೋಟಿ ರೂ. ವೆಚ್ಚದಲ್ಲಿ ಮಂಗಳೂರಿನಲ್ಲಿ ಮೀನುಗಾರಿಕಾ ಬಂದರು ಪೂರ್ಣಗೊಂಡಿದೆ. ದೊಡ್ಡ ಕಂಪೆನಿಗಳಿಂದ ಸಣ್ಣ ಮೀನುಗಾರರಿಗೆ ತೊಂದರೆಯಾಗದಂತೆ ಕ್ರಮಗೊಳ್ತೇವೆ. ಮೀನುಗಾರರನ್ನು ಬದುಕಿಸಲು ಸರಕಾರ ದಿಟ್ಟ ನಿರ್ಧಾರ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಹೆಚ್ಚು ಉದ್ಯೋಗ ಸೃಷ್ಟಿಗೆ ಪಂಚ ಯೋಜನೆಗಳನ್ನು ಸರಕಾರ ಜಾರಿಗೆ ತಂದಿದೆ. ಬೆಲೆ ಏರಿಕೆ ತಡೆಯಲು ಸರಕಾರ ಗ್ಯಾರಂಟಿ ಯೋಜನೆಗಳನ್ನ ತಂದಿತ್ತು. ಸರಕಾರ ಯೋಜನೆಯನ್ನು ನೋಡಿ ಇದೀಗ ಬಿಜೆಪಿಯವರು ಕೂಡ ಆರ್ಥಿಕ ಸಹಾಯ ನೀಡಲು ಮುಂದಾಗಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಸೇರಿದಂತೆ 5 ಶಾಸಕರು ನನ್ನ ಕೈ ಗಟ್ಟಿಗೊಳಿಸಿದ್ದಾರೆ ಎಂದ ಡಿಕೆಶಿ ಹೇಳಿದ್ದಾರೆ.
ಮೀನುಗಾರಿಕೆ ಸಚಿವ ಮಂಕಾಳ ವೈದ್ಯ, ಮಾತನಾಡಿ,‘ರಾಜ್ಯದಲ್ಲಿ ಮೊದಲ ಬಾರಿಗೆ ಸಮುದ್ರ ಆಂಬುಲೆನ್ಸ್ ಸೇವೆ ಆರಂಭಿಸಲು ಟೆಂಡರ್ ಕರೆಯಲಾಗಿದೆ. ಕರಾವಳಿಯ ಮೂರು ಜಿಲ್ಲೆಗಳಿಗೂ ಈ ಸೇವೆ ವಿಸ್ತರಿಸಲಾಗುವುದು’ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ ದೇಶಪಾಂಡೆ,ಶಾಸಕರಾದ ಸತೀಶ್ ಸೈಲ್,ಶಿವರಾಮ ಹೆಬ್ಬಾರ, ತಿಪ್ಪಣ್ಣ ಕಮಟನೂರ,ಶಾಸಕರಾದ ಭೀಮಣ್ಣ ನಾಯ್ಕ, ಯಶಪಾಲ್ ಸುವರ್ಣ .ಕ.ಜಿಲ್ಲಾಧಿಕಾರಿ ಲಕ್ಷ್ಮೀ ಪ್ರೀಯಾ, ಮೀನುಗಾರಿಕಾ ಇಲಾಖೆ ನಿರ್ದೇಶಕ ದಿನೇಶ್ ಕುಮಾರ್ ಮತ್ತಿರರು ಉಪಸ್ಥಿತರಿದ್ದರು.
PublicNext
22/11/2024 08:27 am