ಶಿವಮೊಗ್ಗ : ಶಿಕಾರಿಪುರದಲ್ಲಿ ಮುಜರಾಯಿ ಇಲಾಖೆಯ ದೇವಸ್ಥಾನಗಳಿಗೆ ಸೇರಿದ ಕೋಟ್ಯಾಂತರ ರೂ. ಮೌಲ್ಯದ ಭೂಮಿ ಭೂಗಳ್ಳರ ಪಾಲಾಗಿದ್ದು, ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಗೆಳೆಯರ ಬಳಗದ ಸದಸ್ಯರು ಇಂದು ಪ್ರತಿಭಟನೆ ನಡೆಸಿದ್ದಾರೆ. ಇಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಈ ಸಂಬಂಧ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಶಿಕಾರಿಪುರ ತಾಲ್ಲೂಕಿನಲ್ಲಿ ಒಟ್ಟು 39 ಮುಜರಾಯಿ ಇಲಾಖೆಯ ದೇವಸ್ಥಾನಗಳಿವೆ. ಅದರಲ್ಲಿ ಪ್ರವರ್ಗ ‘ಎ’ ಯಲ್ಲಿ 38, ಪ್ರವರ್ಗ ‘ಸಿ’ ಯಲ್ಲಿ ಸೇರಿದ ದೇವಸ್ಥಾನಗಳ ಪೈಕಿ 14 ದೇವಸ್ಥಾನಗಳು ಒಟ್ಟು 102 ಎಕರೆಗೂ ಅಧಿಕ ಭೂಮಿಯನ್ನು ಹೊಂದಿದ್ದು, ಅನೇಕ ವರ್ಷಗಳಿಂದ ಭೂಗಳ್ಳರು ಈ ದೇವಸ್ಥಾನಕ್ಕೆ ಸೇರಿದ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದೂರಿದ್ದಾರೆ.
ಶಿಕಾರಿಪುರದ ಪ್ರಮುಖ ದೇವಸ್ಥಾನವಾದ ಶ್ರೀ ಹುಚ್ಚುರಾಯ ಸ್ವಾಮಿ ದೇವಸ್ಥಾನಕ್ಕೆ ಸೇರಿದ 20 ಎಕರೆಗೂ ಅಧಿಕ ಭೂಮಿಯನ್ನು ಹಾಗೂ ಖಾಲಿ ನಿವೇಶನ ಹಾಗೂ ಮನೆಗಳು ಇಂದು ಒತ್ತುವರಿದಾರರ ಪಾಲಾಗಿವೆ. ತಾಲ್ಲೂಕು ಆಡಳಿತ ಇದನ್ನು ನೋಡಿದರೂ ಕೂಡ ಕಣ್ಣು ಮುಚ್ಚಿಕೊಂಡಿದೆ. ತಹಶೀಲ್ದಾರರು ಇದಕ್ಕೆ ಸ್ಪಷ್ಟನೆ ಕೊಡಬೇಕು. ಸರ್ಕಾರ ಕೂಡಲೇ ತಹಶೀಲ್ದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕರ್ನಾಟಕ ಭೂಕಂದಾಯ ಕಾಯ್ದೆಯಡಿಯಲ್ಲಿ ಭೂಗಳ್ಳರ ವಿರುದ್ಧ ವಿಶೇಷ ಕ್ರಮ ಕೈಗೊಂಡು, ದೇವಸ್ಥಾನದ ಆಸ್ತಿಗಳು ಪರರ ಪಾಲಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಸಂಘಟನೆಯಿಂದ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
PublicNext
21/11/2024 09:48 pm