ನಂಜನಗೂಡು: ಹೆಸರಿಗೆ ಮಾತ್ರ ಮುಖ್ಯಮಂತ್ರಿಯ ತವರು ಕ್ಷೇತ್ರ. ಇಲ್ಲಿಯ ಸಮಸ್ಯೆ ಕೇಳಿದರೆ ಎಂತವರು ಕೂಡ ನಾಚಿಕೆಪಡುವಂತಿದೆ. ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಒಟ್ಟು 111 ವಿದ್ಯಾರ್ಥಿಗಳು ಒಂದರಿಂದ ಏಳನೆಯ ತರಗತಿಯವರೆಗೂ ವಿದ್ಯಾಭ್ಯಾಸ ಮಾಡುತ್ತಾರೆ. ಇಲ್ಲಿ ಐವತ್ತಕ್ಕೂ ಹೆಚ್ಚು ಬಾಲಕಿಯರಿದ್ದಾರೆ.
ಈ ಕನ್ನಡ ಶಾಲೆಯಲ್ಲಿ ಪ್ರಮುಖವಾಗಿ ಮಹಿಳಾ ಶಿಕ್ಷಕಿಯರು ಮತ್ತು ಬಾಲಕಿಯರಿಗೆ ಶೌಚಾಲಯದ ವ್ಯವಸ್ಥೆ ಇಲ್ಲದೆ ಬಯಲು ಶೌಚಾಲಯ ಆವರಿಸಿಕೊಂಡಿದ್ದಾರೆ. ಬಯಲು ಶೌಚಾಲಯಕ್ಕೆ ತೆರಳುವ ಬಾಲಕಿಯರು ಮತ್ತು ಶಿಕ್ಷಕಿಯರಿಗೆ ಆತಂಕ ಮತ್ತು ಭಯದ ವಾತಾವರಣ ಸೃಷ್ಟಿಯಾಗಿದೆ. ಈಗ ಕನ್ನಡ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಾಲಕಿಯರು ಶೌಚಾಲಯದ ಸಮಸ್ಯೆಯಿಂದ ಕನ್ನಡ ಶಾಲೆ ತೊರೆಯಲು ಮುಂದಾಗಿದ್ದಾರೆ.
2020-21ನೇ ಸಾಲಿನಲ್ಲಿ ಶಿಕ್ಷಣ ಇಲಾಖೆಯಿಂದ 3.37 ಲಕ್ಷ ರೂ. ವೆಚ್ಚದಲ್ಲಿ ಅನುದಾನ ಹೈಟೆಕ್ ಶೌಚಾಲಯದ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ದೊಡ್ಡಕವಲಂದೆ ಗ್ರಾಮ ಪಂಚಾಯಿತಿಗೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ನರೇಗಾ ಒಗ್ಗೂಡಿಸುವಿಕೆ ಯೋಜನೆಯಡಿಯಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡುವಂತೆ ಪಂಚಾಯಿತಿಗೆ ವಹಿಸಲಾಗಿತ್ತು. ಶೌಚಾಲಯ ನಿರ್ಮಾಣವೇ ಆಗಿಲ್ಲ. ಆದರೆ ಅನುದಾನವನ್ನು ದುರ್ಬಳಕೆ ಮಾಡಿಕೊಂಡು ಗುಳುಂ ಮಾಡಿದ್ದಾರೆ. ಶಾಲಾ ಮಕ್ಕಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುವಂತಾಗಿದೆ. ಪುಟ್ಟ ಬಾಲಕಿಯರು ಮತ್ತು ಶಿಕ್ಷಕಿಯರು ಬಯಲು ಶೌಚಾಲಯವನ್ನು ಅವಲಂಬಿತವಾಗಿರುವ ದೃಶ್ಯ ಮನ ಕಲಕುವಂತಿದೆ. ಶೌಚಾಲಯ ನಿರ್ಮಾಣ ಮಾಡಿಕೊಡುವಂತೆ ಶಾಲೆಯ ಮುಖ್ಯ ಶಿಕ್ಷಕರು ಒಂಬತ್ತು ಬಾರಿ ಅರ್ಜಿಗಳನ್ನು ಗ್ರಾಮ ಪಂಚಾಯಿತಿಗೆ ನೀಡಿದ್ದಾರೆ. ಹೈಟೆಕ್ ಶೌಚಾಲಯದ ಹೆಸರಿನಲ್ಲಿ ಅನುದಾನವನ್ನು ತಿಂದು ತೇಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಕೂಡಲೇ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಡಬೇಕೆಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ.
ಸಿಎಂ ಸುಗಂಧರಾಜು ಪಬ್ಲಿಕ್ ನೆಕ್ಸ್ಟ್ ನಂಜನಗೂಡು.
PublicNext
09/11/2024 06:21 pm