ಆಂಧ್ರ ಪ್ರದೇಶ : ಹಿಂದಿನ ವೈ ಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಸರ್ಕಾರದ ಬಗ್ಗೆ ಸ್ವತಃ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದು ಭಾರೀ ಸಂಚಲನ ಮೂಡಿಸಿದೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ತಿರುಪತಿಯ ಲಡ್ಡು ಪ್ರಸಾದದಲ್ಲಿ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸುತ್ತಿದ್ದರು ಎನ್ನುವ ಸಂಚಲನ ಸೃಷ್ಟಿಸುವ ಹೇಳಿಕೆ ನೀಡಿದ್ದಾರೆ. ಎನ್‌ಡಿಎ ಸಮ್ಮಿಶ್ರ ಸರ್ಕಾರ ರಚನೆಯಾಗಿ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ಮಂಗಳಗಿರಿಯ ಸಿಕೆ ಕನ್ವೆನ್ಷನ್ ಹಾಲ್‌ನಲ್ಲಿ ಎನ್‌ಡಿಎ ಮೈತ್ರಿಕೂಟದ ಶಾಸಕರು, ಸಂಸದರು ಮತ್ತು ಎಂಎಲ್‌ಸಿಗಳ ಸಭೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಹಿಂದಿನ ಜಗನ್ ಸರ್ಕಾರ ತಿರುಮಲ ಪ್ರಸಾದ ಕಲಬೆರಕೆ ಮಾಡುವ ಮೂಲಕ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತಂದು ಅಪವಿತ್ರಗೊಳಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಸಾಮಾನ್ಯವಾಗಿ ತಿರುಮಲ ಲಡ್ಡು ಪ್ರಸಾದಕ್ಕೆ ಶುದ್ಧ ಹಸುವಿನ ತುಪ್ಪ ಬಳಸಬೇಕು ಆದರೆ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸುವ ಮೂಲಕ ವೆಂಕಟೇಶ್ವರ ಸ್ವಾಮಿಗೆ ಅವಮಾನ ಮಾಡಿದ್ದಾರೆ. ನಮ್ಮ ಸರ್ಕಾರ ಬಂದ ಬಳಿಕ ಎಲ್ಲ ಗುಣಮಟ್ಟದ ಪದಾರ್ಥಗಳೊಂದಿಗೆ ಲಡ್ಡು ಪ್ರಸಾದವನ್ನು ತಯಾರಿಸುತ್ತಿದ್ದೇವೆ ಎಂದಿದ್ದಾರೆ.
PublicNext
19/09/2024 08:54 am