*ಅರಿವು*

*ಹಾರಿತಾನಂದ*
*ಸಂಗ್ರಹ : ಪ್ರಜಾವಾಣಿ ಪತ್ರಿಕೆ*

*ಕೃಷ್ಣನ ಹೆಸರೇ ಲೋಕಪ್ರಿಯ*

ಶ್ರೀಕೃಷ್ಣ ಎಂಬುದು ಒಂದು ಪ್ರಸಿದ್ಧ ರಹಸ್ಯ.' ಡಿವಿಜಿಯವರ ಈ ಮಾತನ್ನು ಎಷ್ಟು ಮನನ ಮಾಡಿದರೂ ಸಾಲದು. ಕೃಷ್ಣಹಸ್ಯವನ್ನು ಬಯಲು ಮಾಡುವ ತವಕದಲ್ಲಿ ಎಷ್ಟೋ ರಸಮಾರ್ಗಗಳು ಸೃಷ್ಟಿಯಾಗಿವೆ. ಕಾವ್ಯ, ನಾಟಕ, ಸಂಗೀತ, ಶಿಲ್ಪ, ನೃತ್ಯ - ಹೀಗೆ ಕಲಾಪರಂಪರೆಯ ಮೂಲಸ್ರೋತವೇ ಕೃಷ್ಣ ಎನಿಸಿದ್ದಾನೆ. ಮಹಾಕಾವ್ಯವಾದ ಮಹಾಭಾರತದ ನಾಯಕನೂ, ಮಹಾಪುರಾಣವಾದ ಭಾಗವತದ ದೈವವೂ ಕೃಷ್ಣನೇ.

ಸಂಸ್ಕೃತ ಕಾವ್ಯಪರಂಪರೆಯ ಎರಡು ವಿಶಿಷ್ಟ ಕೃತಿಗಳೆಂದರೆ ಜಯದೇವನ 'ಗೀತಗೋವಿಂದ' ಮತ್ತು ಲೀಲಾಶುಕನ 'ಶ್ರೀಕೃಷ್ಣಕರ್ಣಾಮೃತ'. ಗೀತಗೋವಿಂದ ಪ್ರಧಾನವಾಗಿ ಕೃಷ್ಣನ ಶೃಂಗಾರಭಾವಕ್ಕೆ ಮೀಸಲಾದುದು.

ಕೃಷ್ಣತತ್ತ್ವದ ಎಲ್ಲ ಆಯಾಮಗಳನ್ನು ರಸಮಯವಾಗಿ ಸ್ಪರ್ಶಿಸಿರುವ ಕೃತಿಯೇ ‘ಶ್ರೀಕೃಷ್ಣಕರ್ಣಾಮೃತ’. ಬಿಡಿಪದ್ಯಗಳ ಗುಚ್ಛವಾದ ಈ ಕಲಾಖಂಡ ದಿಟವಾಗಿಯೂ ನಮ್ಮ ಭಾವ-ಬುದ್ಧಿಗಳಿಗೆ ಅಮೃತಪ್ರಾಯವೇ ಹೌದು. ಕೃಷ್ಣನ ಒಂದೊಂದು ಅವಸ್ಥೆಯ ಹಿನ್ನೆಲೆಯಲ್ಲಿರುವ ಮಹೋನ್ನತ ತಾತ್ತ್ವಿಕತೆಯನ್ನು ರಸಮಯವಾಗಿ ನಿರೂಪಿಸಿರುವ ಕ್ರಮ ಸಾಹಿತ್ಯಲೋಕದಲ್ಲಿಯೇ ಅನನ್ಯವಾದುದು.

ಕಮಲಮಯ ಬಾಲಕೃಷ್ಣ

ಬಾಲಕೃಷ್ಣ ಹೇಗೆ ಮಲಗಿದ್ದಾನೆ? ಲೀಲಾಶುಕ ಹೀಗೆ ಕಂಡಿದ್ದಾನೆ:

ಕರಾರವಿಂದೇನ ಪದಾರವಿಂದಂ

ಮುಖಾರವಿಂದೇ ವಿನಿವೇಶಯಂತಮ್ /

ವಟಸ್ಯ ಪತ್ರಸ್ಯ ಪುಟೇ ಶಯಾನಂ,

ಬಾಲಂ ಮುಕುಂದ ಮನಸಾ ಸ್ಮರಾಮಿ //

'ತನ್ನ ಕೈಯೆಂಬ ಕಮಲದಿಂದ ತನ್ನ ಕಾಲೆಂಬ ಕಮಲವನ್ನು ತನ್ನ ಬಾಯಿಯೆಂಬ ಕಮಲದೊಳಕ್ಕೆ ಇರಿಸಿಕೊಳ್ಳುತ್ತಿರುವವನೂ, ಆಲದ ಎಲೆಯ ಪೆಟ್ಟಿಗೆಯಂಥ ಒಳಭಾಗದಲ್ಲಿ ಮಲಗಿರುವವನೂ ಆದ ಬಾಲಕೃಷ್ಣನನ್ನು ಮನಃಪೂರ್ವಕವಾಗಿ ನೆನೆಯುತ್ತೇನೆ.'

ರಾಮನೇ ಕೃಷ್ಣ ಕೃಷ್ಣನೇ ರಾಮ

ಅದು ಬಾಲಕೃಷ್ಣನಿಗೆ ಕಥೆಯನ್ನು ಹೇಳುವ ಸಮಯ. ಅಮ್ಮ ಅವನಿಗೆ ಕಥೆ ಹೇಳುತ್ತಿದ್ದಾಳೆ - ಅದು ರಾಮಾಯಣದ ಕಥೆ. ಕೃಷ್ಣನಿಗೆ ಅವನ ಹಿಂದಿನ ಅವತಾರದ ಕಥೆ; ರಾಮ‌ ಮತ್ತು ಕೃಷ್ಣ - ಇಬ್ಬರೂ ಮಹಾವಿಷ್ಣು ಅವತಾರ ಎಂದೇ ಎಣಿಕೆಯಲ್ಲವೆ? ಲೀಲಾಶುಕನು ಈ ಕಥಾಪ್ರಸಂಗವನ್ನು ಕಾಣಿಸಿರುವ ಪರಿಯನ್ನು ನೋಡಿ: 'ರಾಮೋ ನಾಮ ಬಭೂವ' 'ಹುಂ' 'ತದಬಲಾ ಸೀತೇತಿ' 'ಹುಂ' 'ತಾಂ ಪಿತು-ರ್ವಾಚಾ ಪಂಚವಟೀತಟೇ ವಿಹರತಃ ತಸ್ಯಾಹರದ್ರಾವಣಃ!' ನಿದ್ರಾರ್ಥಂ ಜನನೀ ಕಥಾಮಿತಿ ಹರೇರ್ಹುಂಕಾರತಃ ಶ್ರುಣ್ವತಃ 'ಸೌಮಿತ್ರೇ ಕ್ವ ಧನುರ್ಧನುರ್ಧನು'ರಿತಿ ವ್ಯಗ್ರಾ ಗಿರಃ ಪಾತು ವಃ //

ಕೃಷ್ಣನಿಗೆ ತಾಯಿ ಕಥೆಯನ್ನು ಹೇಳುತ್ತಿದ್ದಾಳೆ: 'ರಾಮ ಎಂಬುವನೊಬ್ಬ ಇದ್ದ'. ಕೃಷ್ಣ ಹೂಂಗುಟ್ಟಿದ್ದಾನೆ: 'ಹುಂ'. 'ಅವನ ಹೆಂಡತಿ ಸೀತೆ'. 'ಹುಂ'. ' ತಂದೆಯ ಮಾತಿನಂತೆ ಅವನು ಪಂಚವಟೀ ಅರಣ್ಯಪ್ರದೇಶದಲ್ಲಿ ಓಡಿಯಾಡುತ್ತಿದ್ದ ಆ ರಾಮನ ಹೆಂಡತಿಯಾದ ಸೀತೆಯನ್ನು ರಾವಣನು ಎತ್ತಿಕೊಂಡು ಹೋದನು.' ಹೀಗೆ ಮಗು ನಿದ್ರೆ ಮಾಡಲಿ ಎಂದು ತಾಯಿ ಹೇಳುತ್ತಿದ್ದ ಕಥೆಯನ್ನು ಹೂಂಗುಟ್ಟುತ್ತ ಕೇಳುತ್ತಿತ್ತು. ಸೀತೆಯ ಅಪಹರಣದ ಕಥಾಭಾಗವನ್ನು ಕೇಳುತ್ತಿದ್ದಂತೆಯೇ ಬಾಲಕೃಷ್ಣ 'ಓ ಲಕ್ಷ್ಮಣಾ! ಎಲ್ಲಿ ನನ್ನ ಬಿಲ್ಲು, ಬಿಲ್ಲು, ಬಿಲ್ಲು' ಎಂದು ಉದ್ಗರಿಸಿದನಂತೆ. ಆ ಬಾಲಕೃಷ್ಣ ನಿಮ್ಮನ್ನು ಕಾಪಾಡಲಿ.

ಕತ್ತಲೆಯಾಯಿತು ಹಾಲು ಕೊಡಮ್ಮ!

ಬಾಲಕೃಷ್ಣನ ಬಾಲ್ಯಸಹಜ ಮುಗ್ಧತೆಗೂ ಚುರುಕುತನಕ್ಕೂ ಲೀಲಾಶುಕ ಒಂದು ಅಪೂರ್ವ ಪ್ರಸಂಗವನ್ನು ಕಟ್ಟಿಕೊಟ್ಟಿದ್ದಾನೆ. ಒಮ್ಮೆ ಕೃಷ್ಣ ತಾಯಿಯನ್ನು 'ಅಮ್ಮಾ!' ಎಂದು ಕರೆದ. 'ಏನು ಕೃಷ್ಣ?' ತಾಯಿ ಕೇಳಿದಳು. 'ಬಟ್ಟಲನ್ನು ಕೊಡಮ್ಮ'. ' ಅದರಿಂದ ಏನು ಕೆಲಸ ನಿನಗೆ?', 'ಹಾಲು ಕುಡಿಯುವುದಕ್ಕೆ'. 'ಈಗ ಅದಿಲ್ಲ'. ' ಮತ್ತೆ ಯಾವಾಗ?' ' ರಾತ್ರಿಯಲ್ಲಿ.' ' ಅದು ಹೇಗಿರುತ್ತದೆ?' ' ಅದು ಕತ್ತಲೆಯ ಹುಟ್ಟು.' ತಾಯಿಯ ಈ ಮಾತನ್ನು ಕೇಳಿದ ಕೂಡಲೇ ಬಾಲಕೃಷ್ಣ ಅವನ ಎರಡು ಕಣ್ಣುಗಳನ್ನೂ ಮುಚ್ಚಿಕೊಂಡು, 'ಕತ್ತಲಾಯಿತು, ಹಾಲಿನ ಬಟ್ಟಲನ್ನು ಕೊಡು' ಎಂದು ತಾಯಿಯನ್ನು ಪೀಡಿಸಿದನಂತೆ.

ದನಕಾಯುವವನು; ಕಾಪಾಡುವವನೂ ಹೌದು

ಶ್ರೀಕೃಷ್ಣನ ವ್ಯಕ್ತಿತ್ವದ ಸಂಕೀರ್ಣತೆಯನ್ನೂ ಗಹನತೆಯನ್ನೂ ಲೀಲಾಶುಕ ಬಹಳ ಸರಳವಾಗಿ, ಆದರೆ ತುಂಬ ಸರಸ ಮನೋಹರ ಗಂಭೀರವಾಗಿ ನಿರೂಪಿಸಿದ್ದಾನೆ:

ತೇಜಸೇsಸ್ತು ನಮೋ ಧೇನುಪಾಲಿನೇ ಲೋಕಪಾಲಿನೇ /

ರಾಧಾಪಯೋಧರೋತ್ಸಂಗಶಾಯಿನೇ ಶೇಷಶಾಯಿನೇ//

ಕೃಷ್ಣ ಒಬ್ಬ ಗೊಲ್ಲ; ದನಗಳನ್ನು ಕಾಯುವವ. ಸಾಮಾನ್ಯವಾಗಿ ದನಕಾಯುವವರ ಬಗ್ಗೆ ಲೋಕಕ್ಕೆ ತಿರಸ್ಕಾರ ಇರುತ್ತದೆಯಷ್ಟೆ. ಕವಿ ನಮ್ಮನ್ನು ಇಲ್ಲಿ ಎಚ್ಚರಿಸುತ್ತಿದ್ದಾನೆ - ಕೃಷ್ಣ ಒಬ್ಬ ದನಗಾಹಿ ಎಂದಷ್ಟೆ ಅಂದುಕೊಳ್ಳಬೇಡಿ; ಅವನು ದನಗಳನ್ನು ಕಾಯುವಷ್ಟೇ ಸುಲಭವಾಗಿ ಈ ಲೋಕವನ್ನೂ ಕಾಪಾಡುತ್ತಿದ್ದಾನೆ.

ಕೃಷ್ಣನ ಬಗ್ಗೆ ಇನ್ನೂ ಒಂದು ಆರೋಪ ಉಂಟು; ಅವನು ಸ್ತ್ರೀಲೋಲ; ಜಾರ. ರಾಧೆಯ ಎದೆಯ ಮೇಲೆ ಸದಾ ಒರಗಿರುವವನು. ಹೀಗೆಲ್ಲ ಅವನನ್ನು ಟೀಕಿಸಲು ಅವಕಾಶ ಉಂಟು. ಕವಿ ಇಲ್ಲೂ ನಮ್ಮನ್ನು ಎಚ್ಚರಿಸುತ್ತಿದ್ದಾನೆ. ರಾಧೆಯ ಮೇಲೆ ಮಲಗಿರುವ ಕೃಷ್ಣನಷ್ಟೆ ನಿಮಗೆ ಕಾಡುತ್ತಿರುವುದು; ಆದರೆ ಅವನು ಆದಿಶೇಷ, ಎಂದರೆ ಹಾವಿನ ಹಾಸಿಗೆಯ ಮೇಲೂ (ಶೇಷಶಾಯಿಯೇ) ಮಲಗಿದ್ದಾನೆ ಎನ್ನುವುದನ್ನು ಮರೆಯಬೇಡಿ!

Shrinivas G

Shrinivas G

5 days ago

Cinque Terre

1.64 K

Cinque Terre

0