ಭೋಪಾಲ್: ಹಾವುಗಳು ಮಳೆಗಾಲ ಬಂತೆಂದರೆ ಸಾಕು ಬೆಚ್ಚನೆಯ ಪ್ರದೇಶವನ್ನು ಹುಡುಕಿಕೊಂಡು ಬರುತ್ತವೆ. ಈ ವೇಳೆ ಶೂಗಳಲ್ಲಿ, ಬೈಕ್ಗಳಲ್ಲಿ ಅಷ್ಟೇ ಯಾಕೆ ಮನೆಗಳಲ್ಲಿನ ಇಕ್ಕಾಟದ ಪ್ರದೇಶಗಳಲ್ಲಿ ಹಾವುಗಳು ಅಡಗಿಕೊಳ್ಳುವುದನ್ನು ನಾವು ನೋಡಿದ್ದೇವೆ. ಅದಕ್ಕೆ, ತಾಜಾ ಘಟನೆಯಲ್ಲಿ ಹಾವೊಂದು ವಿದ್ಯಾರ್ಥಿನಿಯೊಬ್ಬಳ ಸ್ಕೂಲ್ ಬ್ಯಾಗ್ ಒಳಗೆ ನುಸುಳಿಬಿಟ್ಟಿದೆ.
ಹೌದು, ಈ ಘಟನೆ ಸೆಪ್ಟೆಂಬರ್ 22 ರಂದು ಮಧ್ಯಪ್ರದೇಶದ ಡಾಟಿಯಾ ಜಿಲ್ಲೆಯ ಬಡೋನಿ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ಅದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರ ಗಮನವನ್ನು ತನ್ನೆಡೆಗೆ ಸೆಳೆದಿದೆ.
10ನೇ ತರಗತಿಯ ವಿದ್ಯಾರ್ಥಿನಿ ಉಮಾ ರಜಾಕ್, ಎಂದಿನಂತೆಯೇ ಮನೆಯಿಂದ ತನ್ನ ಬ್ಯಾಗ್ ನೇತು ಹಾಕಿಕೊಂಡು ಶಾಲೆಗೆ ಬಂದಿದ್ದಾಳೆ. ಈ ವೇಳೆ ಬ್ಯಾಗ್ನಿಂದ ಪಠ್ಯಪುಸ್ತಕವನ್ನು ತೆಗೆದುಕೊಳ್ಳಲು ಆಕೆ ಮುಂದಾದಾಗ, ಬ್ಯಾಗ್ ಮೇಲಿನಿಂದ ಮೃದುವಾದ ವಸ್ತುವೊಂದು ಇರುವುದು ಅವಳ ಅನುಭವಕ್ಕೆ ಬರುತ್ತದೆ. ಏನಿದು ಮೃದುವಾಗಿ ಸಿಗುತ್ತಿದೆಯಲ್ಲ ಎಂದು ವಿದ್ಯಾರ್ಥಿನಿ ಗೊಂದಲದ ಗಾಬರಿಗೊಳ್ಳುತ್ತಾಳೆ.
ಅದರಿಂದ ವಿದ್ಯಾರ್ಥಿನಿ ತನ್ನ ಶಿಕ್ಷಕರಿಗೆ ಈ ವಿಚಾರವನ್ನು ತಿಳಿಸುತ್ತಾಳೆ.
ಆಕೆಯ ಬ್ಯಾಗ್ ಅನ್ನು ತೆಗೆದುಕೊಳ್ಳುವ ಶಿಕ್ಷಕ, ತರಗತಿಯಿಂದ ಹೊರಗೆ ತಂದು ಜಿಪ್ ತೆಗೆದು, ಒಳಗಿದ್ದ ಪುಸ್ತಕವನ್ನೆಲ್ಲ ಹೊರಗೆ ಸುರಿಯುತ್ತಾರೆ. ಈ ವೇಳೆ ಕಪ್ಪು ಬಣ್ಣದ ನಾಗರಹಾವೊಂದು ಬ್ಯಾಗ್ನಿಂದ ಹೊರಗೆ ಬೀಳುತ್ತದೆ. ಬ್ಯಾಗ್ನಿಂದ ಕೆಳಗೆ ಬಿದ್ದ ತಕ್ಷಣ ಹಾವು ಅಲ್ಲಿಂದ ಪರಾರಿಯಾಗುತ್ತದೆ. ಅದನ್ನು ನೋಡಿ ಅಲ್ಲಿದ್ದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಗಾಬರಿಯಾಗುತ್ತಾರೆ.
PublicNext
27/09/2022 04:30 pm