ಒಮ್ಮೊಮ್ಮೆ ನಾಯಿ ಕೂಡ ನಮಗೆ ಹೆದರುವುದಿಲ್ಲ. ಇನ್ನು ಸಿಂಹವನ್ನು ಹೆದರಿಸುವ ಮಾತು ದೂರವೇ ಸರಿ. ಆದ್ರೆ ವ್ಯಕ್ತಿಯೊಬ್ಬರು ಸಿಂಹವನ್ನು ನಾಯಿಯಂತೆ ಓಡಿಸಿ ಹಸುಗಳ ಹಿಂಡನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಗುಜರಾತ್‌ನ ಅಮ್ರೆಲಿ ಜಿಲ್ಲೆಯಲ್ಲಿ ನಡೆದಿದ್ದು, ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ. ಆಕಳುಗಳ ಕೂಗಿಗೆ ಮನೆಯಿಂದ ಹೊರ ಬಂದ ವ್ಯಕ್ತಿಯೊಬ್ಬರು ರಸ್ತೆಯ ಮಧ್ಯ ನಿಲ್ಲುತ್ತಾರೆ. ಈ ವೇಳೆ ಹಸುಗಳ ಹಿಂಡು ಏಕಾಏಕಿ ನುಗ್ಗುತ್ತದೆ. ತಕ್ಷಣವೇ ಅವುಗಳಿಂದ ತಪ್ಪಿಸಿಕೊಂಡು ಕಾರಿನ ಮರಿಗೆ ನಿಲ್ಲುತ್ತಾರೆ. ಬಳಿಕ ಅಲ್ಲಿಂದ ಕಟ್ಟಿಗೆ ಹಿಡಿದು ಹೊರ ಬರುತ್ತಿದ್ದಂತೆ ಆಕಳನ್ನು ಬೆನ್ನಟ್ಟಿ ಸಿಂಹವೊಂದು ಬರುತ್ತದೆ. ಈ ವೇಳೆ ಧೈರ್ಯ ಕಳೆದುಕೊಳ್ಳದೆ ಸಿಂಹದ ಎದುರಿಗೆ ಹೋಗಿ ಕಟ್ಟಿಗೆಯನ್ನು ಎಸೆಯುತ್ತಾರೆ.
ವ್ಯಕ್ತಿಯ ದಾಳಿಗೆ ಹೆದರಿದ ಸಿಂಹ ಅಲ್ಲಿಂದ ಕಾಲು ಕೀಳುತ್ತದೆ. ಅಷ್ಟೇ ಅಲ್ಲದೆ ಸಿಂಹ ಬಂದ ದಾರಿಯಿಂದ ಮತ್ತೊಂದು ಕರು ತಪ್ಪಿಸಿಕೊಂಡು ಹೊರ ಬರುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಕ್ತಿಯ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
09/01/2021 06:32 pm