ವಿಜಯನಗರ: ಗಣಿಗಾರಿಕೆಯ ಕಾಲದಲ್ಲಿ ಅದೆಷ್ಟೋ ಜನ, ಧೂಳು ಕುಡಿದು ಅನಾರೋಗ್ಯದಿಂದ ಸಮಸ್ಯೆ ಅನುಭವಿಸಿದವರೇಷ್ಟೋ? ಈಗ ಹಳ್ಳಿಗಳಿಗೆ ಹೊಂದಿಕೊಂಡಿರೋ ಅರಣ್ಯ ಪ್ರದೇಶದಲ್ಲಿ 405 ಎಕರೆಯಲ್ಲಿ ಹೊಸ ಮೈನಿಂಗ್ ಪರವಾನಿಗೆ ನೀಡೋಕೆ ರೆಡಿಯಾಗಿದ್ದು, ಆ ಭಾಗದ ಜನ, ಹಳೆಯ ದಿನಗಳು ಬರುತ್ವೇನೋ ಅನ್ನೋ ಆತಂಕ ಎದುರಾಗಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.
ಹೊಸಪೇಟೆ ತಾಲೂಕಿನ ಗಾಳೆಮ್ಮನಗುಡಿ ವ್ಯಾಪ್ತಿಯಲ್ಲಿ ಮೈನಿಂಗ್ ನಡೆಸಲು ಅವಕಾಶ ಕೊಡಬಾರದು. ಇದಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ನಡೆಸಲುದ್ದೇಶಿಸಿರುವ ಸಾರ್ವಜನಿಕ ಸಭೆಯನ್ನು ರದ್ದುಗೊಳಿಸಬೇಕು. ಫೆಬ್ರವರಿ 24ರಂದು ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ರದ್ದುಗೊಳಿಸಬೇಕೆಂದು ಈಗಾಗಲೇ ಜಿಲ್ಲಾಧಿಕಾರಿಗಳು ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಈ ಕುರಿತು ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಜಿಲ್ಲಾಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ನಮ್ಮ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.
ಈ ಹಿಂದೆ MSPL ನವರು ನಡೆಸುತ್ತಿದ್ದ ಮೈನಿಂಗ್ ಅನ್ನು ಈಗ ಜಿಂದಾಲ್ ಕಂಪನಿಯವರು ನಡೆಸಲು ಇದೇ ತಿಂಗಳು 24ಕ್ಕೆ ಪಬ್ಲಿಕ್ ಹಿಯರಿಂಗ್ ಕರೆದಿದ್ದಾರೆ. ಈ ಮೈನಿಂಗ್ ಮಾಡೋದ್ರಿಂದ ಗಾಳೆಮ್ಮನಗುಡಿ ಗ್ರಾಮಕ್ಕೆ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟಾಗುತ್ತೆ. ಜೊತೆಗೆ ಗ್ರಾಮಕ್ಕೆ ಮೂರು ಹಳ್ಳಗಳ ಮೂಲಕ ನೀರು ನುಗ್ಗುತ್ತದೆ. ಇದರಿಂದ ರೋಗ ರುಜಿನಗಳು ಬರುತ್ತಿವೆ. ಮೈನ್ಸ್ ಮಣ್ಣು ಡ್ಯಾಂ ನೀರಿಗೆ ಸೇರುತ್ತದೆ. ಹಾಗಾಗಿ ಇದರ ಬಗ್ಗೆ ಗ್ರಾಮ ಪಂಚಾಯತಿ, ವಾರ್ಡ್ ಸಭೆಯಲ್ಲೂ ವಿರೋಧ ವ್ಯಕ್ತಪಡಿಸಿದ್ದೇವೆ. ಗ್ರಾಮದಲ್ಲಿ ಏನಾದರು ಅನಾಹುತ ಆದರೆ ಪಿಡಿಒ, ಗ್ರಾಮ ಪಂಚಾಯತಿ ಅಧ್ಯಕ್ಷರೇ ಹೊಣೆಯಾಗುತ್ತಾರೆ. ಮಳೆನೀರು ಬಂದಾಗ ತಹಶೀಲ್ದಾರ್, ಆರ್ ಐ, ವಿಎ ಕೂಡ ಬಂದು ಪರಿಶೀಲಿಸಿದ್ದಾರೆ. ಆದರೆ ಯಾವುದೇ ಪರಿಹಾರ ನೀಡಿಲ್ಲ. ಕೇವಲ ಬಂದಾಗೊಮ್ಮ ಪೋಸ್ ಕೊಟ್ಟು ಹೋಗ್ತಾರೆ ಅಂತ ದೂರಿದರು.
ಮೈನ್ಸ್ ಬ್ಲಾಸ್ಟಿಂಗ್‌ನಿಂದ ಬಹಳ ಸಮಸ್ಯೆಯಾಗಿದೆ. ಊರಲ್ಲಿ 60-70 ಮನೆ ಬಿರುಕು ಬಿಟ್ಟಿವೆ. ಯಾವುದೇ ಕಾರಣಕ್ಕೂ ಮೈನಿಂಗ್ ನಡೆಯಬಾರದು. ಸಾರ್ವಜನಿಕ ಸಭೆ ನಡೆಸಲು ಬಂದರೆ ಹೆದ್ದಾರಿಯಲ್ಲಿ ಅಡ್ಡ ಕೂರುತ್ತೇವೆ. ಮೈನ್ಸ್ ಲಾರಿಗಳು ಇದೇ ರಸ್ತೆಯಲ್ಲಿ ಹೋಗುತ್ತವೆ. ಶಾಲಾ ಮಕ್ಕಳು ಇದೇ ಮಾರ್ಗವಾಗಿ ಹೋಗುತ್ತಾರೆ. ಮಕ್ಕಳಿಗೂ ರಕ್ಷಣೆ ಇಲ್ಲದಂತಾಗುತ್ತದೆ. ಯಾವುದೇ ಕಾರಣಕ್ಕೂ ಮೈನ್ಸ್ ಗೆ ಪರವಾನಿಗೆ ನೀಡಬಾರದು ಎಂದು ಜನರು ಒತ್ತಾಯಿಸಿದ್ದಾರೆ. ಇದ್ರ ಮಧ್ಯೆ 24ರಂದು ನಡೆಯುವ ಪಬ್ಲಿಕ್ ಹಿಯರಿಂಗ್ ನಡೆಸಲು ಗ್ರಾಮಸ್ಥರು ಬಿಡ್ತಾರಾ? ಇಲ್ವಾ? ಅನ್ನೋದನ್ನ ಕಾದು ನೋಡಬೇಕಿದೆ.
ಪಾಂಡುರಂಗ ಜಂತ್ಲಿ ಪಬ್ಲಿಕ್ ನೆಕ್ಸ್ಟ್ ವಿಜಯನಗರ
PublicNext
03/02/2025 09:16 am