ಕೊಟ್ಟೂರು: ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಘಟನೆ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿ ನಡೆದಿದೆ.
ಆಫ್ರೀನ್ ಎಂಬ ಮಹಿಳೆಯೇ ಮಂಜುನಾಥ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಎನ್ನಲಾಗಿದೆ.
ಆತ್ಮಹತ್ಯೆಗೆ ಯತ್ನಿಸಿದ ಆಫ್ರೀನ್ ಮೂಲತಃ , ಕೊಟ್ಟೂರು ಪಟ್ಟಣದ ಬಳ್ಳಾರಿ ಕ್ಯಾಂಪ್ ನಿವಾಸಿ ಆಗಿದ್ದಾರೆ.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ 3 ಲಕ್ಷ ಹಣ ಸಾಲದ ರೂಪದಲ್ಲಿ ಮಹಿಳೆ ಪಡೆದಿದ್ರು. ಪಡೆದ ಸಾಲಕ್ಕೆ ಪ್ರತಿಯಾಗಿ ಮಹಿಳೆ ಪ್ರತಿ ವಾರ 2,700 ರೂಪಾಯಿಯಂತೆ ಇಲ್ಲಿಯವರೆಗೆ ಒಟ್ಟು 2 ಲಕ್ಷ ಸಾಲ ಮರುಪಾವತಿ ಮಾಡಿದ್ದಾರೆ.
ಕಂತು ಕಟ್ಟುವ ದಿನ ಸೋಮವಾರ ಇದ್ದಿದ್ರಿಂದ ಇಂದು ಆಫ್ರೀನ್ ಬಳಿ 2,700 ಹಣ ತುಂಬಲು ಇಲ್ಲದ್ದಕ್ಕೆ ಸಾಲ ಪಾವತಿ ಮಾಡೋದಕ್ಕೆ ವಿಳಂಬ ಆಗಿದೆ. ಹಣ ಇಲ್ಲದ ಬಗ್ಗೆ ಧರ್ಮಸ್ಥಳದ ಮಂಜುನಾಥ ಮೈಕ್ರೋ ಫೈನಾನ್ಸ್ ಸಿಬ್ಬಂದಿಗೆ ಮನವಿ ಮಾಡಿದ್ದಾರೆ. ಆದ್ರೂ ಸುಮ್ಮನಾಗದ ಸಿಬ್ಬಂದಿ ಹೇಗಾದ್ರೂ ಮಾಡಿ ಹಣ ಕಟ್ಟಲೇಬೇಕು ಅಂತಾ ಮಹಿಳೆ ಮೇಲೆ ವಿಪರೀತ ಒತ್ತಡ ಹೇರಿದ್ದಾರೆ. ಇದ್ರಿಂದ
ಮಾನಸಿಕ ಒತ್ತಡದಿಂದ ನೊಂದು ಜಿರಳೆಗೆ ಹೊಡೆಯುವ ಔಷಧಿಯನ್ನು ಸೇವಿಸಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ವಿಷ ಸೇವನೆ ಮಾಡಿಕೊಂಡು ಅಸ್ವಸ್ಥತೆಗೆ ಒಳಗಾಗಿದ್ದ ಮಹಿಳೆಯನ್ನು ಹರಪನಹಳ್ಳಿ ಪಟ್ಟಣದ ಆಸ್ಪತ್ರೆಗೆ ಚಿಕಿತ್ಸೆಗೆ ಅಂತ ದಾಖಲು ಮಾಡಲಾಗಿದೆ. ಸದ್ಯ ಮಹಿಳೆ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸ್ತಿದ್ದಾರೆ. ಕೊಟ್ಟೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
03/02/2025 10:27 pm