ಹೈಕೋರ್ಟ್ ಧಾರವಾಡ ಪೀಠದ ಆದೇಶವಿದ್ದರೂ ಹಳಿಯಾಳ ತಾಲೂಕಿನ ಸಾಂಬ್ರಾಣಿ ಹೋಬಳಿಯ ಕಾಳಗಿನಕೊಪ್ಪದ ಕೃಷಿ ಜಮೀನುಗಳ ಗಡಿ ಗುರುತಿಸದೆ ಸರ್ಕಾರ, ಜಿಲ್ಲಾ ಹಾಗೂ ತಾಲೂಕು ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು, ಆ ಮೂಲಕ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆಂದು ಆರೋಪಿಸಿ ರೈತರು ಕಾರವಾರದ ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿ ರೈತನಿಗೆ ನಾಲ್ಕು ಎಕರೆಯಂತೆ 297 ರೈತರಿಗೆ ಸರ್ಕಾರದಿಂದ 1969- 70ರಲ್ಲಿ ಕೃಷಿ ಜಮೀನು ಮಂಜೂರಾಗಿದೆ. ಆದರೆ ಈ ಜಮೀನುಗಳ ಗಡಿ ಗುರುತಿಸುವ ಕಾರ್ಯ ಈವರೆಗೆ ಆಗಿಲ್ಲ. ಈ ಬಗ್ಗೆ ಅಂದಿನಿಂದಲೂ ಸರ್ಕಾರ, ಅಧಿಕಾರಿಗಳಿಗೆ ರೈತರು ಮನವಿ ಮಾಡುತ್ತಲೇ ಬಂದರೂ ಈವರೆಗೆ ಯಾರೂ ಕೂಡ ಕಿವಿಗೊಟ್ಟಿಲ್ಲ. ಹೀಗಾಗಿ ಈ ಬಗ್ಗೆ ಹೈಕೋರ್ಟ್ ಧಾರವಾಡ ಪೀಠದಲ್ಲಿ ಸಂಬಂಧಪಟ್ಟ ರೈತರೆಲ್ಲ ಸೇರಿ 2013ರಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ 2015ರಲ್ಲಿ ರೈತರ ಪರ ಆದೇಶ ಮಾಡಿದೆ. ಕೂಡಲೇ ಜಮೀನುಗಳನ್ನ ಅಳತೆ ಮಾಡಿ, ಗಡಿ ಗುರುತಿಸಿ, ಸಾಗುವಳಿ ಮಾಡಲು ಅನುಕೂಲ ಮಾಡಿಕೊಡುವಂತೆ ತಿಳಿಸಿದೆ. ಆದರೂ ಸರ್ಕಾರ, ಅಧಿಕಾರಿಗಳು ಮಾತ್ರ ಈವರೆಗೆ ಆದೇಶ ಪಾಲಿಸಿಲ್ಲ.
ಇನ್ನು ಕೋರ್ಟ್ ಆದೇಶವಿದ್ದರೂ ಸಹ ಅಧಿಕಾರಿಗಳು ಈ ಬಗ್ಗೆ ಯಾವುದೇ ಪ್ರಕ್ರಿಯೆಯಗಳನ್ನ ನಡೆಸದಿರುವುದು ರೈತರಿಗೆ ಮುಂದೇನು ಮಾಡಬೇಕು, ನ್ಯಾಯಕ್ಕಾಗಿ ಮತ್ಯಾರಿಗೆ ಕೇಳ್ಬೇಕು ಎನ್ನುವಂತೆ ಅತಂತ್ರರನ್ನಾಗಿಸಿದೆ. ಜಮೀನಿಗೆ ಸಂಬಂಧಿಸಿ ಎಲ್ಲಾ ದಾಖಲೆಗಳೂ ಸಿದ್ಧವಿದೆ. ಆದ್ರೆ, ಗಡಿ ಗುರುತಿಸದೆ ಸಮಸ್ಯೆಯಾಗಿದೆ. ಅಕ್ಕಪಕ್ಕದ ಜಮೀನುದಾರರು ಸರ್ಕಾರ ಮಂಜೂರಿಸಿದ ಜಮೀನು ಕೂಡ ತಮ್ಮದೆಂದು ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರಂತೆ. ಹೀಗಾಗಿ ದಿಕ್ಕು ತೋಚದಂತಾಗಿರುವ ರೈತರು, ಜಿಲ್ಲಾಧಿಕಾರಿಗಳ ಕಚೇರಿಯೆದುರೇ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು ಆಕ್ರೋಶ ಹೊರಹಾಕಿದ್ದಾರೆ.
ಸದ್ಯ ಜಿಲ್ಲಾಧಿಕಾರಿ ಕಚೇರಿಯ ಮೂಲಕ ರಾಷ್ಟ್ರಪತಿ, ಪ್ರಧಾನಮಂತ್ರಿಗಳಿಗೆ ರೈತರು ತಮ್ಮ ಸಮಸ್ಯೆಗಳ ಬಗ್ಗೆ ಮನವಿ ರವಾನಿಸಿದ್ದಾರೆ. ಕೋರ್ಟ್ ಆದೇಶಕ್ಕೂ ಬಗ್ಗದವರಿಗೆ ರಾಷ್ಟ್ರಪತಿ, ಪ್ರಧಾನಮಂತ್ರಿಗಳಿಂದಾದರೂ ನ್ಯಾಯ ಸಿಗತ್ತಾ ಎನ್ನುವುದನ್ನ ಕಾದುನೋಡಬೇಕಿದೆ.
PublicNext
30/09/2022 04:39 pm