ಕಾರವಾರ: ಕಳೆದ ವಾರ ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದ, ಕಾರವಾರ ತಾಲೂಕಿನ ಮಾಜಾಳಿ ಗ್ರಾಮದಲ್ಲಿ 350 ಕೋಟಿ ವೆಚ್ಚದಲ್ಲಿ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಮೀನುಗಾರರಿಂದ ವಿರೋಧ ವ್ಯಕ್ತವಾಗಿದೆ. ಸಾಂಪ್ರದಾಯಿಕ ಮೀನುಗಾರರಿಗೆ ಸಮಸ್ಯೆ ಆಗಲಿದ್ದು, ಯಾವುದೇ ಕಾರಣಕ್ಕೂ ಬಂದರು ನಿರ್ಮಾಣ ಬೇಡ ಎಂದು ಸ್ಥಳೀಯ ಮೀನುಗಾರರು ಹೇಳಿದ್ದಾರೆ.
ಮಾಜಾಳಿಯಲ್ಲಿ ಬಹುತೇಕ ಸಾಂಪ್ರದಾಯಿಕ ಮೀನುಗಾರರೇ ಮೀನುಗಾರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಇದೀಗ ಬಂದರು ನಿರ್ಮಾಣದಿಂದ ದೊಡ್ಡ ಬೋಟ್ ಇಟ್ಟುಕೊಂಡಿರುವ ಮೀನುಗಾರರಿಗೆ ಮಾತ್ರ ಉಪಯೋಗವಾಗಲಿದೆ. ಸಾಂಪ್ರದಾಯಿಕ ಮೀನುಗಾರಿಕೆ ಮಾಡಲು ಸ್ಥಳ ಇಲ್ಲದಂತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ನೌಕಾನೆಲೆ ನಿರಾಶ್ರಿತರನ್ನು ಚಿತ್ತಾಕುಲದಲ್ಲಿ ವಸತಿಗೆ ಅವಕಾಶ ಮಾಡಿಕೊಡಲಾಯಿತು. ಇದರಿಂದ ಮೀನುಗಾರಿಕೆ ಮಾಡುವವರ ಸಂಖ್ಯೆ ಹೆಚ್ಚಾಗಿ ಮಾಜಾಳಿಯ ಮೀನುಗಾರರಿಗೆ ಇಂದಿಗೂ ಸಮಸ್ಯೆ ಆಗುತ್ತಿದೆ. ಈ ನಡುವೆ ದೊಡ್ಡ ಬಂದರು ನಿರ್ಮಾಣ ಮಾಡಿ ಇರುವ ಮೀನುಗಾರರನ್ನು ಒಕ್ಕಲೆಬ್ಬಿಸಿ ಬೇರೆ ಕಡೆ ಕಳುಹಿಸುವ ಹುನ್ನಾರ ಮಾಡಲಾಗಿದೆ. ಯಾವ ಮೀನುಗಾರರು ಬಂದರು ನಿರ್ಮಾಣಕ್ಕೆ ಬೇಡಿಕೆ ಇಟ್ಟಿಲ್ಲ. ಹೀಗಿದ್ದಾಗ ಸರ್ಕಾರ ಯಾಕೆ ಬಂದರು ನಿರ್ಮಾಣಕ್ಕೆ ಮುಂದಾಗಿದೆ ಎಂದು ಮೀನುಗಾರರು ಕಿಡಿಕಾರಿದ್ದಾರೆ.
ಒಟ್ಟಿನಲ್ಲಿ ಸಾಗರಮಾಲಾ ಯೋಜನೆಯ ಬಳಿ ಕಾರವಾರದಲ್ಲೀಗ ಮಾಜಾಳಿ ಬಂದರು ನಿರ್ಮಾಣ ಮತ್ತೊಂದು ಹೋರಾಟಕ್ಕೆ ಇಂಬು ನೀಡುವ ಸಾಧ್ಯತೆ ಇದೆ ಎನ್ನಲಾಗಿದ್ದು, ಇದು ಮುಂದೆ ಯಾವ ರೀತಿಯ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
PublicNext
10/09/2022 08:11 pm