ಕಾರವಾರ: ಪ್ಯಾಕೇಜ್ ಗುತ್ತಿಗೆಯ ವಿರುದ್ಧ ಕಾರವಾರ ತಾಲೂಕು ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದಿಂದ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ಧಾರವಾಡ ಪೀಠ ಮಾನ್ಯ ಮಾಡಿದ್ದು, ನಗರೋತ್ಥಾನ ಕಾಮಗಾರಿಗಳನ್ನ ಪ್ಯಾಕೇಜ್ ಟೆಂಡರ್ ಮಾಡುವುದಕ್ಕೆ ತಡೆಯಾಜ್ಞೆ ನೀಡಿದೆ.
ಇಲ್ಲಿನ ನಗರಸಭೆಯು ನಗರೋತ್ಥಾನ ಹಂತ- 4ರಲ್ಲಿ 18 ಕೋಟಿ ರೂ.ಗಳ ಕಾಮಗಾರಿಗಳನ್ನು ಪ್ಯಾಕೇಜ್ ಮಾಡಲು ಟೆಂಟರ್ ಕರೆದಿತ್ತು. ಇದರಲ್ಲಿ ರಸ್ತೆ, ಚರಂಡಿ ಸೇರಿದಂತೆ ಇನ್ನಿತರೆ ಸಣ್ಣಪುಟ್ಟ ಕಾಮಗಾರಿಗಳು ಸೇರಿವೆ. ಈ ಬಗ್ಗೆ ಗುತ್ತಿಗೆದಾರರ ಸಂಘದಿಂದ ಹೈಕೋರ್ಟ್ ವಕೀಲ ಶರಣು ಅವರನ್ನು ಸಂಪರ್ಕಿಸಿ, ಎ.ಸಿ.ಚಾಕಲಬ್ಬಿ ಅಸೋಶಿಯೇಟ್ ಮೂಲಕ ಹೈಕೋರ್ಟ್ ಧಾರವಾಡ ಪೀಠಕ್ಕೆ ಪ್ಯಾಕೇಜ್ ರದ್ಧತಿಗೆ ಸಂಬಂಧಿಸಿ ಅರ್ಜಿ ಸಲ್ಲಿಸಲಾಗಿತ್ತು.
ಕೋರ್ಟ್ ಎಲ್ಲಾ ಪೂರಕ ದಾಖಲೆಗಳನ್ನು ಪರಿಗಣಿಸಿ ನಗರೋತ್ಥಾನ ಕಾಮಗಾರಿಗಳನ್ನು ಪ್ಯಾಕೇಜ್ ಮಾಡುವುದಕ್ಕೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ಈ ಆದೇಶ ಗುತ್ತಿಗೆದಾರರಲ್ಲಿ ಸಂತಸ ಮೂಡಿಸಿದ್ದು, ಶುಕ್ರವಾರ ನಗರಸಭೆಯ ಗಾಂಧಿ ಪಾರ್ಕ್ ನಲ್ಲಿ ಮಹಾತ್ಮ ಗಾಂಧಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಸಿಹಿ ಹಂಚುವ ಮೂಲಕ ಕೋರ್ಟ್ ಆದೇಶವನ್ನು ಸಂಭ್ರಮದಿಂದ ಸ್ವಾಗತಿಸಿಕೊಂಡರು.
ಇನ್ನು ಇದೇ ವೇಳೆ ಮಾತನಾಡಿದ ತಾಲೂಕು ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ, ಕಾರವಾರ ಗುತ್ತಿಗೆದಾರರಿಗೆ ಮೊದಲ ಹೆಜ್ಜೆಯಲ್ಲಿಯೇ ಜಯ ಸಿಕ್ಕಿದೆ. ಹೈಕೋರ್ಟ್ ಧಾರವಾಡ ಪೀಠವು ಗುತ್ತಿಗೆದಾರರ ಕುಂದು- ಕೊರತೆ ಹಾಗೂ ಪೂರಕ ದಾಖಲೆಗಳನ್ನೆಲ್ಲ ಕೂಲಂಕುಷವಾಗಿ ಪರಿಶೀಲಿಸಿ, ನಗರೋತ್ಥಾನ ಕಾಮಗಾರಿಗಳನ್ನು ಪ್ಯಾಕೇಜ್ ಮಾಡುವುದಕ್ಕೆ ತಡೆಯಾಜ್ಞೆ ನೀಡಿದೆ. ಇದರಿಂದಾಗಿ ಇಡೀ ಜಿಲ್ಲೆಯ ಗುತ್ತಿಗೆದಾರರಿಗೆ ನ್ಯಾಯ ಸಿಕ್ಕಿದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
PublicNext
09/09/2022 07:27 pm