ಕಾರವಾರ(ಉತ್ತರ ಕನ್ನಡ): ಬೀದಿನಾಯಿಯೊಂದನ್ನು ನುಂಗಿ ದೇವಸ್ಥಾನವೊಂದರ ಸಮೀಪದ ಪೊದೆಯಲ್ಲಿ ಅಡಗಿಕೊಂಡಿದ್ದ ಬರೋಬ್ಬರಿ 12 ಅಡಿ ಉದ್ದದ ಬೃಹತ್ ಹೆಬ್ಬಾವೊಂದನ್ನು ಹಿಡಿದು ಕಾಡಿಗೆ ಬಿಡಲಾಗಿದೆ.
ಕಾರವಾರದ ತೇಲಂಗ ರೋಡ್ ಚಂದ್ರದೇವಿ ವಾಡದ ಚಂದ್ರದೇವಿ ದೇವಸ್ಥಾನದ ಹತ್ತಿರ ಈ ಬೃಹತ್ ಹೆಬ್ಬಾವು ಕಾಣಿಸಿಕೊಂಡಿದೆ. ಆಹಾರ ಹುಡುಕಿಕೊಂಡು ದೇವಸ್ಥಾನದ ಬಳಿ ಬಂದಿದ್ದ ಈ ಹೆಬ್ಬಾವು, ಬೀದಿನಾಯಿಯನ್ನು ಹಿಡಿದು ಅರ್ಧ ನುಂಗಿಬಿಟ್ಟಿತ್ತು! ಇದರಿಂದಾಗಿ ಸ್ಥಳೀಯರು, ದೇವಸ್ಥಾನಕ್ಕೆ ಬರುವ- ಹೋಗುವ ಭಕ್ತರು ಕಂಗಾಲಾಗಿದ್ದರು. ತಕ್ಷಣ ಅರಣ್ಯ ಇಲಾಖೆಯ ಉರಗತಜ್ಞ ಗೋಪಾಲ ನಾಯ್ಕ ಹಾಗೂ ಉರಗ ಸಂರಕ್ಷಕ ನಿತಿನ್ ಅವರಿಗೆ ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು.
ಹೆಬ್ಬಾವು ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿತ್ತು. ಅದರಲ್ಲೂ ಅರ್ಧ ನುಂಗಿದ್ದ ನಾಯಿ ಕೂಡ ಜೀವ ಬಿಟ್ಟಿದ್ದರಿಂದ ಬೇಟೆಯನ್ನು ಬಿಡಿಸುವುದು ಸರಿಯಲ್ಲವೆಂದು ಸಂರಕ್ಷಣೆಗೆ ಬಂದಿದ್ದ ಇಬ್ಬರೂ ಸುಮ್ಮನಾಗಿದ್ದರು. ಆದರೆ, ಸ್ಥಳೀಯರ ಒತ್ತಾಯದಿಂದಾಗಿ ಬೇಟೆಯನ್ನು ಬಿಡಿಸಿ, ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟು ಬರಲಾಗಿದೆ.
ಈ ಹೆಬ್ಬಾವನ್ನು ನೋಡಲು ನೂರಾರು ಜನ ನೆರೆದಿದ್ದರು. ನವರಾತ್ರಿಯಾಗಿದ್ದ ಕಾರಣ ದೇವಸ್ಥಾನಕ್ಕೆ ಬಂದವರೆಲ್ಲ ಹೆಬ್ಬಾವನ್ನು ನೋಡಲು ನಿಂತುಬಿಟ್ಟಿದ್ದರು. ಈ ಬೃಹತ್ ಹೆಬ್ಬಾವು ಸುಮಾರು 45 ಕೆ.ಜಿ. ಭಾರವಿದ್ದು, ನಾಲ್ಕಾರು ಜನರ ಸಹಕಾರದಿಂದ ದೊಡ್ಡಚೀಲಕ್ಕೆ ತುಂಬಿ ಕೊಂಡೊಯ್ಯಲಾಯಿತು.
PublicNext
04/10/2022 10:05 pm