ಕಾರವಾರ: ಇತ್ತೀಚೆಗೆ ಅತಿ ಹೆಚ್ಚು ಮಳೆ ಸುರಿದು ಹಾನಿಗೀಡಾದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಉಮ್ಮಚಗಿ ಪಂಚಾಯತ ವ್ಯಾಪ್ತಿಯ ರೈತರ ತೋಟಕ್ಕೆ ತೋಟಗಾರಿಕಾ ಇಲಾಖೆಯ ಅಧಿಕಾರಿ ಹೀನಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಿದ ಉಮ್ಮಚಗಿ ಗ್ರಾ.ಪಂ. ಸದಸ್ಯೆ ಸರಸ್ವತಿ ಪಟಗಾರ, ತುಡುಗುಣಿ, ಚವತ್ತಿ ಭಾಗದ ಪ್ರತಿ ಊರಿನಲ್ಲೂ ಮಳೆಯಿಂದಾಗಿ ಹಾನಿಯುಂಟಾಗಿದೆ. ಹಾನಿಗೊಳಗಾದ ರೈತರೂ ಸಂಕಟದಲ್ಲಿದ್ದಾರೆ. ಅವರ ಅಡಿಕೆ ಬೆಳೆಗೆ ಕೊಳೆ ರೋಗ ಬಾಧಿಸುವ ಸಾಧ್ಯತೆ ಹೆಚ್ಚಿದೆ. ಕಾಳು ಮೆಣಸಿಗೂ ರೋಗ ಕಾಡಬಹುದು ಎನ್ನುವ ಆತಂಕ ಹೊಂದಿದ್ದಾರೆ ಎಂದು ಹೇಳಿದರು.
ಮಳೆಯಿಂದಾಗಿ ಹಾಸ್ಪುರದ ನರಸಿಂಹ ಹೆಗಡೆ ಎನ್ನುವವರ ತೋಟಕ್ಕೆ ದೊಡ್ಡ ದೊಡ್ಡ ಕಲ್ಲುಗಳ ರಾಶಿಯೇ ಬಂದು ಬಿದ್ದಿದ್ದು, ಕೂಮನಮನೆಯ ಗ್ರಾ.ಪಂ. ಮಾಜಿ ಸದಸ್ಯ ಮಂಜು ಮೊಗೇರ ಅವರ ಮನೆಗೆ ಹೋಗುವ ರಸ್ತೆಗೆ ಅಳವಡಿಸಿದ್ದ ಪೈಪ್ ಕಿತ್ತು ಹೋಗಿ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ.
ಮಳೆಯಿಂದಾಗಿ ಚವತ್ತಿ ಮತ್ತು ತುಡುಗುಣಿ ಪ್ರದೇಶದಲ್ಲಿ ಭತ್ತಕ್ಕೆ ಹಾನಿಯಾಗಿ, ನಾಟಿ ಮಾಡಿದ ಭತ್ತದ ಸಸಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಕೃಷಿ ಇಲಾಖೆಯ ಅಧಿಕಾರಿಗಳು ಹಾನಿಯಾಗಿ ವಾರವಾದರೂ ಸ್ಥಳಕ್ಕೆ ಬಂದು ರೈತರನ್ನು ಭೇಟಿ ಮಾಡಿ ಕೊನೆ ಪಕ್ಷ ಅವರಿಗೆ ಸಾಂತ್ವನ ಹೇಳುವ ಕೆಲಸವನ್ನೂ ಮಾಡಿಲ್ಲ. ಕೃಷಿ ಇಲಾಖೆಯ ಅಧಿಕಾರಿಗಳ ಈ ನಡೆಯ ಬಗ್ಗೆ ರೈತರು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಭತ್ತ ಬೆಳೆಯುವವರೇ ಕಡಿಮೆಯಾಗಿದ್ದಾರೆ. ಹೀಗಿರುವಾಗ ಭತ್ತ ಬೆಳೆದು ಸಂಕಷ್ಟಕ್ಕೀಡಾದರೂ ತಿರುಗಿ ನೋಡದ ಇಲಾಖೆ ಇದ್ದರೆಷ್ಟು ಬಿಟ್ಟರೆಷ್ಟು ಎಂಬ ಅಭಿಪ್ರಾಯವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ.
PublicNext
11/09/2022 10:31 am