ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ : 'ಲೇಡಿ ಸಿಂಗಂ' ವರ್ಗಾವಣೆಗೆ ತೆರೆಮರೆಯ ಪ್ರಯತ್ನ; ಸಾರ್ವಜನಿಕರ ವಿರೋಧ

ಕಾರವಾರ (ಉತ್ತರಕನ್ನಡ): ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಅವರ ವರ್ಗಾವಣೆಗೆ ತೆರೆಮರೆಯ ಕಸರತ್ತು ನಡೆಯುತ್ತಿರುವ ಸುದ್ದಿ ಸದ್ಯ ಜಿಲ್ಲೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ನಡುವೆ ಪೆನ್ನೇಕರ್ ಅವರನ್ನ ಯಾವುದೇ ಕಾರಣಕ್ಕೂ ವರ್ಗಾಯಿಸದಂತೆ ಸಾರ್ವಜನಿಕರಿಂದ ಒತ್ತಾಯಗಳೂ ಕೇಳಿಬಂದಿವೆ.

ಡಾ.ಪೆನ್ನೇಕರ್ ಅವರು ಉತ್ತರಕನ್ನಡಕ್ಕೆ ಬಂದು ಅಕ್ಟೋಬರ್ ತಿಂಗಳಿಗೆ ಒಂದು ವರ್ಷ ಪೂರ್ಣಗೊಳುತ್ತಿದೆ. ಅವರು ಜಿಲ್ಲೆಗೆ ಬಂದ ಎರಡ್ಮೂರು ತಿಂಗಳಲ್ಲೇ ಜಿಲ್ಲೆಯಲ್ಲಿ ನಡೆಯುತ್ತಿದ್ದ ಅನೈತಿಕ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದರು. ಇದರಿಂದಾಗಿ ರಾಜಕಾರಣಿಗಳು, ದಂಧಾಕೋರರ ಕೆಂಗಣ್ಣಿಗೆ ಗುರಿಯಾಗಿದ್ದ ಪೆನ್ನೇಕರ್ ಅವರನ್ನ ವರ್ಗಯಿಸಲು ಅಂದಿನಿಂದಲೇ ಕಸರತ್ತುಗಳು ಆರಂಭವಾಗಿತ್ತಾದರೂ, ಒಮ್ಮೆ ವರ್ಗಾವಣೆಯಾದ ಬಳಿಕ ವರ್ಷ ಪೂರ್ಣಗೊಳ್ಳುವವರೆಗೆ ಏನೂ ಮಾಡಲಾಗುವುದಿಲ್ಲ ಎಂಬ ಕಾರಣಕ್ಕೆ ಸುಮ್ಮನಾಗಿದ್ದರು. ಆದರೆ ಇದೀಗ ಈ ತಿಂಗಳಲ್ಲಿ ಅವರು ಜಿಲ್ಲೆಗೆ ಬಂದು ವರ್ಷ ಪೂರ್ಣಗೊಳ್ಳುತ್ತಿರುವುದರಿಂದ ಅವರ ವರ್ಗಾವಣೆಗೆ ಪ್ರಯತ್ನಗಳು ಚುರುಕುಗೊಂಡಿದೆ. ಇದು ಸಾರ್ವಜನಿಕರ ಕೆಂಗಣ್ಣಿಗೂ ಗುರಿಯಾಗಿದೆ.

ಇನ್ನು ಪೆನ್ನೇಕರ್ ಅವರು ಜಿಲ್ಲೆಗೆ ಬಂದ ಬಳಿಕ ಸಾಕಷ್ಟು ಬದಲಾವಣೆಗಳಾಗಿವೆ. ಐಪಿಎಸ್ ಎಂಬ ಹಮ್ಮು- ಬಿಮ್ಮಿಲ್ಲದೆ, ಜನರೊಂದಿಗೆ ಸರಳವಾಗಿ ಬೆರೆಯುವ ಹಾಗೂ ಯಾರ ಮಾತಿಗೂ ಬಗ್ಗದ ದಕ್ಷ ಅಧಿಕಾರಿಯೆಂಬ ಹೆಗ್ಗಳಿಕೆಯನ್ನ ತಮ್ಮ ನಡೆ- ನುಡಿಗಳಿಂದಲೇ ಅವರು ಪಡೆದುಕೊಂಡಿದ್ದಾರೆ. ಇಂಥ ಅಧಿಕಾರಿಯನ್ನ ಯಾವುದೇ ಕಾರಣಕ್ಕೂ ವರ್ಗಾಯಿಸಬಾರದು. ಒಂದುವೇಳೆ ಸರ್ಕಾರ ಜನರ ಭಾವನೆಗಳಿಗೆ ಬೆಲೆ ಕೊಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಎದುರಿಸಬೇಕಾದೀತು ಎಂಬ ಎಚ್ಚರಿಕೆಯನ್ನ ಸಾಮಾಜಿಕ ಕಾರ್ಯಕರ್ತರು ನೀಡಿದ್ದಾರೆ.

ಒಟ್ಟಿನಲ್ಲಿ ಲೇಡಿ ಸಿಂಗಂ ಎಂದೇ ಜಿಲ್ಲೆಯಲ್ಲಿ ಖ್ಯಾತಿ ಗಳಿಸಿದ್ದ ಡಾ.ಪೆನ್ನೇಕರ್ ಅವರ ನೇರ ನಡೆ- ನುಡಿಗಳೇ ಇದೀಗ ಅವರಿಗೆ ಮುಳುವಾದಂತಾಗಿದ್ದು, ಸದ್ಯ ಈ ಅಕ್ಟೋಬರ್ ತಿಂಗಳು ಮುಗಿಯುತ್ತಿದ್ದಂತೆ ಏನೆಲ್ಲ ಬೆಳವಣಿಗೆಗಳು ನಡೆಯಲಿದೆ ಎಂಬುದನ್ನ ಕಾದುನೋಡಬೇಕಿದೆ.

Edited By : Nagesh Gaonkar
PublicNext

PublicNext

12/10/2022 03:17 pm

Cinque Terre

24.66 K

Cinque Terre

1

ಸಂಬಂಧಿತ ಸುದ್ದಿ