ಕಾರವಾರ (ಉತ್ತರ ಕನ್ನಡ): ರಾಷ್ಟ್ರೀಯ ಹಸಿರು ಪೀಠ ಕರಾವಳಿಯ ನದಿಗಳಲ್ಲಿ ಮರಳು ತೆಗೆಯುವುದನ್ನು ನಿರ್ಬಂಧಿಸಿ ಆದೇಶಿಸಿರುವುದು ನಿರ್ಮಾಣ ಕ್ಷೇತ್ರಕ್ಕೆ ದೊಡ್ಡ ಹೊಡೆತ ನೀಡಿದಂತಾಗಿದೆ. ಮರಳಿಲ್ಲದೆ ಕಟ್ಟಡ ನಿರ್ಮಾಣ, ಅಭಿವೃದ್ಧಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ.
ಇತ್ತೀಚಿಗೆ ಚೆನ್ನೈನ ರಾಷ್ಟ್ರೀಯ ಹಸಿರುವ ಪೀಠ ಸಿಆರ್‌ಜೆಡ್ ವಲಯದಲ್ಲಿ ಮರಳುಗಾರಿಕೆಗೆ ಸಂಬಂಧಿಸಿ ಉಡುಪಿಯ ಪ್ರಕರಣವೊಂದರಲ್ಲಿ ತೀರ್ಪು ನೀಡಿ, ಸಿಆರ್‌ಜೆಡ್ ವಲಯದಲ್ಲಿ ಮಾರಾಟಕ್ಕಾಗಿ ಮರಳು ತೆಗೆಯದಂತೆ ಆದೇಶಿಸಿತ್ತು.
ಈ ಹಿನ್ನಲೆ ಉತ್ತರ ಕನ್ನಡ ಜಿಲ್ಲಾಡಳಿತ ಕೂಡ ಮರಳುಗಾರಿಕೆ ಬಂದ್ ಮಾಡಿದ್ದು, ಅಭಿವೃದ್ಧಿ ಕಾಮಗಾರಿಗಳಿಗೆ ಮರಳಿಲ್ಲದೇ ಪರದಾಡುವಂತಾಗಿದೆ. ಸದ್ಯ ಮಳೆಗಾಲ ಮುಗಿದಿದ್ದು, ನಿರ್ಮಾಣ ಕಾಮಗಾರಿಗಳು ಪ್ರಾರಂಭವಾದರೂ ಮರಳು ಸಿಗದೇ ಜನರು ಪರದಾಡುವಂತಾಗಿದೆ. ಇದರಿಂದಾಗಿ ಅಕ್ರಮ ಮರಳುಗಾರಿಕೆಯೂ ಹೆಚ್ಚಾಗಿದೆ ಎನ್ನುತ್ತಿದ್ದಾರೆ ಗುತ್ತಿಗೆದಾರರು.
ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ 80ರಷ್ಟು ಅರಣ್ಯವೇ ಇರುವುದರಿಂದ ಕಲ್ಲುಕ್ವಾರಿಗಳ ಸಂಖ್ಯೆ ಸಹ ಬೇರೆ ಜಿಲ್ಲೆಗೆ ಹೋಲಿಸಿದರೆ ಕಡಿಮೆ ಇದ್ದು, ಇದರಿಂದಾಗಿ ಮರಳಿಗೆ ಪರ್ಯಾಯವಾದ ಎಂ.ಸ್ಯಾಂಡ್ ಸಹ ಸಿಗುತ್ತಿಲ್ಲ. ಈ ಸಮಸ್ಯೆಗಳ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಕೇಳಿದರೆ, ಸಿಆರ್‌ಜೆಡ್ ವಲಯವಲ್ಲದ ಪ್ರದೇಶದಲ್ಲಿ ಮರಳು ದಿಬ್ಬಗಳನ್ನು ಹುಡುಕಿ ಅಲ್ಲಿ ಮರಳನ್ನ ತೆಗೆಯಲು ಅವಕಾಶ ಕೊಡಲು ಚಿಂತನೆ ನಡೆಸಲಾಗುತ್ತಿದೆ ಎನ್ನುತ್ತಿದ್ದಾರೆ.
ಕೇವಲ ಉತ್ತರ ಕನ್ನಡ ಜಿಲ್ಲೆ ಮಾತ್ರವಲ್ಲ, ಉಡುಪಿ ಹಾಗೂ ಮಂಗಳೂರಿನಲ್ಲೂ ಮರಳುಗಾರಿಕೆ ಬಂದಾಗಿರುವುದು ಸಾರ್ವಜನಿಕರಿಗೆ ಸಮಸ್ಯೆಯಾಗಿ ಕಾಡುತ್ತಿದೆ. ಆದಷ್ಟು ಶೀಘ್ರ ಸರ್ಕಾರ ಈ ಬಗ್ಗೆ ಗಮನಹರಿಸಿ, ಮರಳಿನ ಸಮಸ್ಯೆ ಪರಿಹರಿಸಲು ಮುಂದಾಗಬೇಕಿದೆ ಎನ್ನುವ ಒತ್ತಾಯ ಸಾರ್ವಜನಿಕರದ್ದೂ ಆಗಿದೆ.
PublicNext
11/10/2022 11:28 am