ಕಾರವಾರ: ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ಸಂಪೂರ್ಣ ಹದಗೆಟ್ಟಿದೆ. ದುರಸ್ತಿಗೆ ಮಾತ್ರ ಯಾವುದೇ ಇಲಾಖೆ ಕಿವಿಗೊಡುತ್ತಿಲ್ಲ. ಇದರಿಂದ ಬೇಸತ್ತ ನಾಗರಿಕರು, ಹೆದ್ದಾರಿಯ ಮೇಲೆ ನರ್ಸರಿ ಮಾಡಿ ವಿನೂತನವಾಗಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಅಂಕೋಲಾದಿಂದ ಯಲ್ಲಾಪುರ- ಹುಬ್ಬಳ್ಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 63 ಸಂಚಾರಕ್ಕೆ ಸಂಚಕಾರವಿದ್ದಂತೆ. ಹೆದ್ದಾರಿಯಲ್ಲಿ ನೂರಾರು ಗುಂಡಿಗಳು ಬಿದ್ದಿದ್ದು, ಅಲ್ಲಲ್ಲಿ ಡಾಂಬರ ಕಿತ್ತು ಅಪಘಾತಕ್ಕೆ ಆಹ್ವಾನ ನೀಡುತ್ತಿದೆ.
ಎಷ್ಟೇ ಮನವಿ ಮಾಡಿದರೂ ತಲೆಕೆಡಿಸಿಕೊಳ್ಳದ ಇಲಾಖೆಗಳ ವಿರುದ್ಧ ಸಿಡಿದೆದ್ದ ಸುಂಕಸಾಳ ಪಂಚಾಯತ ವ್ಯಾಪ್ತಿಯ ಹೆಬ್ಬುಳ, ಮಾಸ್ತಿಕಟ್ಟೆ, ಸುಂಕಸಾಳ, ಕೊಡ್ಲಗದ್ದೆ, ರಾಮನಗುಳಿ, ವಜ್ರಳ್ಳಿ ಭಾಗದ ಗ್ರಾಮಸ್ಥರಿಂದು ಕರವೇ ಗ್ರಾಮೀಣ ಘಟಕದ ಸಹಯೋಗದೊಂದಿಗೆ ಹೆದ್ದಾರಿಯಲ್ಲಿ ಬಾಳೆ, ಅಡಿಕೆ ಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರಕ್ಕೆ ಧಿಕ್ಕಾರ ಕೂಗಿ, ಕಣ್ಮುಚ್ಚಿ ಕುಳಿತ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಕಳೆದ 7 ವರ್ಷಗಳಿಂದ ಹೆದ್ದಾರಿ ಸಂಪೂರ್ಣ ಡಾಂಬರಿಕರಣವೇ ಆಗಿಲ್ಲ. ದಿನಕ್ಕೆ 20 ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುವ ಈ ರಸ್ತೆಯ ಬಗ್ಗೆ ಜನಪ್ರತಿನಿಧಿಗಳು, ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಶೀಘ್ರವಾಗಿ ರಸ್ತೆಗೆ ಡಾಂಬರಿಕರಣ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೆದ್ದಾರಿಯುದ್ದಕ್ಕೂ ಮತ್ತೆ ಗಿಡಗಳನ್ನು ನೆಟ್ಟು ಬೃಹತ್ ಪ್ರತಿಭಟನೆ ಮಾಡಬೇಕಾಗಬಹುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ಇನ್ನು ನಮ್ಮ ಉದ್ದೇಶ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಇಲ್ಲಿನ ಸಮಸ್ಯೆ ತಿಳಿಯಲಿ ಎಂದು ಸಾಂಕೇತಿಕವಾಗಿ ಗಿಡ ನೆಡುವ ಮೂಲಕ ಪ್ರತಿಭಟನೆ ನಡೆಸಿದ್ದೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
PublicNext
26/09/2022 09:48 pm