ಕಾರವಾರ: ಅಂಕೋಲಾ ತಾಲೂಕಿನ ಬಾಳೆಗುಳಿಯಿಂದ ಯಲ್ಲಾಪುರ ಮಾರ್ಗಮಧ್ಯೆ ರಾಷ್ಟ್ರೀಯ ಹೆದ್ದಾರಿ 63ರ ಕಂಚಿನಬಾಗಿಲ ಬಳಿ ಕಿರು ಸೇತುವೆಯಂಚಿನ ರಸ್ತೆ ಕುಸಿತವಾಗಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ.
ರಾತ್ರಿಯಿಡೀ ಸುರಿದ ಮಳೆಯಲ್ಲಿ ರಸ್ತೆಯ ಪಿಚ್ಚಿಂಗ್ ಕಿತ್ತುಹೋಗಿ ರಸ್ತೆ ಕುಸಿದಿದ್ದು, ಹೆದ್ದಾರಿಯಲ್ಲಿ 2 ಮೀಟರಿನಷ್ಟು ಅಗಲದ ಹೊಂಡ ಬಿದ್ದಿದೆ. ದಿನವೊಂದಕ್ಕೆ ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉತ್ತರ ಕನ್ನಡ ವಿಭಾಗದ ಕಿರಿಯ ಎಂಜಿನಿಯರ್ ಪಿ.ಕೆ.ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಸ್ತೆ ಕುಸಿತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ಸಂತೋಷ ಶೆಟ್ಟಿ, ವಾಹನಗಳ ಸಂಚಾರಕ್ಕೆ ತೊಡಕಾಗದಂತೆ ಹೆದ್ದಾರಿ ಒಂದು ಬದಿಯಿಂದ ಮಾತ್ರ ವಾಹನಗಳು ಸಂಚರಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ. ಮಳೆಯಲ್ಲಿಯೂ ಪೊಲೀಸ್ ಸಿಬ್ಬಂದಿ ವಾಹನಗಳ ಸುಗಮ ಸಂಚಾರಕ್ಕೆ ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಹೆದ್ದಾರಿಯಲ್ಲಿ ಮಲ್ಟಿ ಎಕ್ಸೆಲನ ಭಾರೀ ವಾಹನಗಳು ಸಂಚರಿಸುವದರಿಂದ ಸೂಕ್ತ ನಿಗಾ ವಹಿಸಲಾಗುತ್ತಿದೆ. ಸೇತುವೆಯ ಬಳಿಯ ರಸ್ತೆಯ ಮೇಲೆ ಬಹಳಷ್ಟು ಹೊಂಡಗಳಿದ್ದು, ಸದ್ಯ ಜೆಸಿಬಿ ಬಳಸಿ ಜಲ್ಲಿಕಲ್ಲು ಮತ್ತಿತರ ಸಾಮಗ್ರಿಗಳನ್ನು ಬಳಸಿ ಹೊಂಡಗಳನ್ನು ಮುಚ್ಚಲಾಗುತ್ತಿದೆ.
Kshetra Samachara
09/09/2022 10:51 pm