ಕಾರವಾರ: ಅಬ್ಬರದ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಸಂಪೂರ್ಣ ಬಂದ್ ಆಗಿದ್ದು, ನಷ್ಟ ತಂದೊಡ್ಡಿದೆ. ಹವಾಮಾನ ವೈಪರೀತ್ಯ ರಾಜ್ಯ, ಹೊರ ರಾಜ್ಯದ ಮೀನುಗಾರಿಕೆ ಬೋಟುಗಳನ್ನು ಬಂದರಿನಲ್ಲೇ ಲಂಗರು ಹಾಕುವಂತೆ ಮಾಡಿವೆ.
ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ ಇನ್ನೂ ಒಂದು ವಾರ ಮೀನುಗಾರಿಕೆಗೆ ತೆರಳದಂತೆ ಮೀನುಗಾರಿಕೆ ಇಲಾಖೆ ಸೂಚನೆ ನೀಡಿದ್ದರಿಂದ ಜಿಲ್ಲೆಯ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಸಂಪೂರ್ಣ ಸ್ತಬ್ಧವಾಗಿದೆ. ಕಾರವಾರದ ಬೈತಕೋಲ್ ಬಂದರಿನಲ್ಲಿ 500ಕ್ಕೂ ಹೆಚ್ಚು ರಾಜ್ಯ, ಹೊರ ರಾಜ್ಯದ ಬೋಟುಗಳು ಲಂಗರು ಹಾಕಿದ್ದು, ಮೀನುಗಾರರು ಬೋಟ್ ನಲ್ಲೇ ದಿನ ಕಳೆಯುವಂತಾಗಿದೆ.
ಜಿಲ್ಲೆಯಲ್ಲಿ ಆಗಸ್ಟ್ ಒಂದರಿಂದಲೇ ಮೀನುಗಾರಿಕೆ ಪ್ರಾರಂಭವಾಗಿತ್ತು. ಆದರೆ, ವರುಣನ ಆರ್ಭಟಕ್ಕೆ ಹೆದರಿ ಹತ್ತು ದಿನಗಳ ಕಾಲ ಮೀನುಗಾರಿಕೆ ಬಂದ್ ಮಾಡಿದ್ದರು. ಇನ್ನೇನು ಸಮುದ್ರಕ್ಕಿಳಿಯಬಹುದು ಎಂಬ ನಿರೀಕ್ಷೆಯಲ್ಲಿದ್ದ ಮೀನುಗಾರರಿಗೆ ಮತ್ತೆ ಪ್ರಕೃತಿ ಮುನಿದಿದ್ದು, ಇದೀಗ ಮತ್ತೆ ಮೀನುಗಾರಿಕೆ ಬಂದ್ ಆಗಿದೆ.
ಜಿಲ್ಲೆಯಲ್ಲಿ ಇನ್ನೂ ಐದು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಈ ನಡುವೆ ಸಮುದ್ರದಲ್ಲಿ ಹವಾಮಾನ ಬದಲಾವಣೆ ದಿನಕ್ಕೊಂದು ರೀತಿಯಂತೆ ಬದಲಾಗುತ್ತಿದ್ದು, ಮೀನುಗಾರರನ್ನು ಮತ್ತಷ್ಟು ಹೈರಾಣಾಗಿಸಿದೆ.
PublicNext
11/09/2022 09:34 pm