ಕಾರವಾರ: ಹುಬ್ಬಳ್ಳಿಯಿಂದ 2,200 ಕೆ.ಜಿ ದನದ ಮಾಂಸವನ್ನು ಅಕ್ರಮವಾಗಿ ಗೋವಾಕ್ಕೆ ಸಾಗಿಸುತ್ತಿದ್ದ ಐವರನ್ನು ಸಾಗಾಟಕ್ಕೆ ಬಳಸಿದ್ದ ಮೂರು ವಾಹನಗಳ ಸಮೇತ ವಶಕ್ಕೆ ಪಡೆಯಲಾಗಿದೆ.
ಹುಬ್ಬಳ್ಳಿಯಿಂದ ಆಕಳನ್ನ ವಧೆ ಮಾಡಿ, ಅವುಗಳ ಮಾಂಸವನ್ನ ಎರಡು ಮಹೀಂದ್ರ ಬುಲೆರೋ ಪಿಕಪ್ ಹಾಗೂ ಒಂದು ಟಾಟಾ 407 ವಾಹನದಲ್ಲಿ ಬೆಳ್ಳಂಬೆಳಿಗ್ಗೆ ಗೋವಾಕ್ಕೆ ಸಾಗಿಸುತ್ತಿದ್ದ ಬಗ್ಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವಿಶೇಷ ತಂಡ (ಎಸ್‌ಪಿ ಸ್ಕ್ವಾಡ್)ಕ್ಕೆ ಬಂದ ಖಚಿತ ಮಾಹಿತಿಯ ಮೇರೆಗೆ ಪಿಎಸ್‌ಐ ಪ್ರಮೇನಗೌಡ ಪಾಟೀಲ ನೇತೃತ್ವದಲ್ಲಿ ರಾಮನಗರ ಪಿಎಸ್‌ಐ ಯಲ್ಲಾಲಿಂಗ ಕುನ್ನೂರು ಮತ್ತು ಠಾಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.
ಬೆಳಿಗ್ಗೆ 5:30ರ ಸುಮಾರಿಗೆ ಪೊಲೀಸ್ ತಂಡ ಜೊಯಿಡಾದ ಅನಮೋಡ ಅಬಕಾರಿ ಚೆಕ್‌ಪೋಸ್ಟ್ನಲ್ಲಿ ಕಾಯುತ್ತಿದ್ದ ವೇಳೆ ಮಾಂಸ ತುಂಬಿಕೊಂಡಿದ್ದ ಮೂರು ವಾಹನಗಳು ಒಂದರ ಮೇಲೊಂದರಂತೆ ಬಂದಿದೆ. ಈ ವೇಳೆ ತಡೆದು ಪರಿಶೀಲಿಸಿದಾಗ ತಮ್ಮ ಬಳಿ ಮಾಂಸ ಸಾಗಾಟದ ಪರವಾನಗಿ ಇದೆ ಎಂದು ಆರೋಪಿತರು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ದಾಖಲೆಗಳು ಇರಲಿಲ್ಲ ಎನ್ನುವುದು ವಿಚಾರಣೆಯ ವೇಳೆಗೆ ತಿಳಿದುಬಂದಿದೆ.
ತಕ್ಷಣ ಮೂರೂ ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು, ಮೂರರಿಂದಲೂ 3.10 ಲಕ್ಷ ರೂ. ಮೌಲ್ಯದ 2,220 ಕೆಜಿ ದನದ ಮಾಂಸ ಜಪ್ತಿ ಮಾಡಿಕೊಂಡಿದ್ದಾರೆ. ಪ್ರಕರಣದಲ್ಲಿ ಅಳ್ನಾವರದ ಸಾದಿಕ್, ಇಲಿಯಾಸ್, ದಾವಲ್, ಖಾನಾಪುರದ ರಾಜಾಸಾಬ ಹಾಗೂ ಶಾಹೀದ್ ಗುಡುಸಾಬ ಎನ್ನುವವರನ್ನ ವಶಕ್ಕೆ ಪಡೆಯಲಾಗಿದೆ. ಇವರ ವಿರುದ್ಧ ಕರ್ನಾಟಕ ಗೋಹತ್ಯೆ ತಡೆ ಕಾಯ್ದೆ- 2020ರ ಕಲಂ 4, 7, 12 ಮತ್ತು ಮೋಟಾರು ವಾಹನ ಕಾಯ್ದೆ 192 (ಎ) ಅಡಿಯಲ್ಲಿ ರಾಮನಗರ ಪೊಲೀಸ್ ಠಾಣೆಯ ತನಿಖಾ ಪಿಎಸ್‌ಐ ಲಕ್ಷ್ಮಣ ಪೂಜಾರಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
PublicNext
02/10/2022 09:47 pm