ಕಾರವಾರ : ಮನೆ ಕಳ್ಳತನ ನಡೆಸುತ್ತಿದ್ದ ನಾಲ್ವರು ಚಿಗುರು ಮೀಸೆಯ ಯುವಕರನ್ನ ಶಿರಸಿ ಪೊಲೀಸರು ಬಂಧಿಸಿದ್ದಾರೆ. ಶಿರಸಿ ತಾಲೂಕಿನ ಬನವಾಸಿ ನಿವಾಸಿಗಳಾದ ಮಹಮ್ಮದ್ ಕೈಫ್ (19), ವಿಶ್ವ ಪಾವಸ್ಕರ್ (21), ಯಾಸಿನ್ ಭಾಷಾ ಸಾಬ್ (18) ಹಾಗೂ ರಿಯಾಜ್ ಇಕ್ಬಾಲ್ ಚೌದರಿ (19) ಬಂಧಿತ ಆರೋಪಿಗಳಾಗಿದ್ದಾರೆ. ಕೈಫ್ ಕೂಲಿ ಕೆಲಸ ಮಾಡಿಕೊಂಡಿದ್ದು, ರಿಯಾಜ್ ಕೃಷಿ ಕೆಲಸ ಮಾಡಿಕೊಂಡಿದ್ದಾನೆ. ವಿಶ್ವ ಹಾಗೂ ಯಾಸಿನ್ ಇಬ್ಬರೂ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ.
ಸೆ.7ರಂದು ಬನವಾಸಿಯ ಖಲೀಲ್ ಅಬ್ದುಲ್ ಎನ್ನುವವರ ಮನೆಯಲ್ಲಿಟ್ಟಿದ್ದ 2.55 ಲಕ್ಷ ನಗದು ಹಾಗೂ 4 ಸಾವಿರ ಮೌಲ್ಯದ ಉಂಗುರಗಳನ್ನ ಬೆಳ್ಳಂಬೆಳಿಗ್ಗೆ ಯಾರೋ ಕದ್ದೊಯ್ದಿದ್ದರು. ಈ ಸಂಬಂಧ ಮನೆಯ ಮಾಲೀಕ ಬನವಾಸಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಆರೋಪಿತರನ್ನು ಹೆಚ್ಚಿನ ವಿಚಾರಣೆ ನಡೆಸಿದ ವೇಳೆ ಮಹಮ್ಮದ್ ಕೈಫ್ ಫೆಬ್ರುವರಿ 16ರಂದು ಬನವಾಸಿಯ ಸುವರ್ಣಾ ಮಾಲತೇಶ ಎಂಬುವವರ ಮನೆಯಲ್ಲಿಯೂ ಸಹ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಈ ಮೂಲಕ ಬನವಾಸಿ ಠಾಣೆಯಲ್ಲಿ ದಾಖಲಾಗಿದ್ದ ಎರಡು ಮನೆ ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡಿದಂತಾಗಿದೆ. ಆರೋಪಿತರಿಂದ ಎರಡೂ ಮನೆ ಕಳ್ಳತನ ಪ್ರಕರಣಗಳೂ ಸೇರಿದಂತೆ ಒಟ್ಟೂ 2.75 ಲಕ್ಷ ನಗದು ಹಾಗೂ 10 ಗ್ರಾಂ ಬಂಗಾರದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Kshetra Samachara
26/09/2022 09:35 pm