ಯಲ್ಲಾಪುರ ತಾಲೂಕಿನ ಬ್ಯಾಂಕ್ ಆಫ್ ಬರೋಡಾದಲ್ಲಿ 2.69 ಕೋಟಿ ರೂ. ಬ್ಯಾಂಕ್ ಅಧಿಕಾರಿಯೇ ಲಪಟಾಯಿಸಿ ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಚುರುಕುಗೊಂಡಿದೆ. ಈ ನಡುವೆ ಹಣ ಕ್ರೆಡಿಟ್ ಆಗಿದ್ದ ಖಾತೆಯಲ್ಲಿ ಸದ್ಯ ಝೀರೋ ಬ್ಯಾಲೆನ್ಸ್ ಇರುವುದು ತಿಳಿದುಬಂದಿದೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಮಾಹಿತಿ ನೀಡಿದ್ದಾರೆ. ಯಲ್ಲಾಪುರ ಬ್ಯಾಂಕ್ ಆಫ್ ಬರೋಡಾದಲ್ಲಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕುಮಾರ್ ಬೋನಾಲ ಎನ್ನುವಾತ ಐದು ತಿಂಗಳ ಹಿಂದೆ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಸೇರ್ಪಡೆಗೊಂಡಿದ್ದ. ಅಂದಿನಿಂದ ಸೆ.5ರವರೆಗೆ ಬ್ಯಾಂಕ್‌ನ ಸಿಬ್ಬಂದಿಯ ಲಾಗಿನ್ ಮೂಲಕ ಕರೆಂಟ್ ಅಕೌಂಟ್‌ನಿಂದ ತನ್ನ ಪತ್ನಿಯ ಹೆಸರಿನ ಖಾತೆಗೆ ಹಣವನ್ನ ವರ್ಗಾಯಿಸಿಕೊಂಡಿದ್ದಾನೆ. ಈ ಬಗ್ಗೆ ವಾರದ ಬಳಿಕ ಬ್ಯಾಂಕ್‌ನ ಇತರ ಅಧಿಕಾರಿಗಳಿಗೆ ಮಾಹಿತಿ ದೊರೆತು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ವಂಚನೆ ಪ್ರಕರಣ ದಾಖಲಾಗುವ ಕೆಲ ದಿನಗಳ ಹಿಂದೆ ಆರೋಪಿ ಕಾಣೆಯಾಗಿರುವ ಕುರಿತು ಕೂಡ ಪ್ರಕರಣ ದಾಖಲಾಗಿದೆ. ಸದ್ಯ ಆತ ಹಣ ವರ್ಗಾಯಿಸಿರುವ ಖಾತೆಯಲ್ಲಿ ಯಾವುದೇ ಹಣವಿಲ್ಲ. ನಮ್ಮ ತಂಡ ತನಿಖೆ ಮುಂದುವರಿಸಿದ್ದು, ಆರೋಪಿಯ ಬಂಧನದ ಬಳಿಕ ಹಣವನ್ನು ಮರುಭರಣ ಮಾಡಿಸಿಕೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.
PublicNext
12/09/2022 06:08 pm