ಉಡುಪಿ : ಇತ್ತೀಚಿನ ವರ್ಷಗಳಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಮತ್ತಿತರ ಪ್ರಾಕೃತಿಕ ವೈಪರೀತ್ಯಗಳಿಂದ ಪಶು ಆಹಾರ, ಹಸಿಹುಲ್ಲು, ಬೈ ಹುಲ್ಲು, ಪಶು ಚಿಕಿತ್ಸೆ ಔಷಧೋಪಚಾರ , ಕೂಲಿ ಆಳುಗಳ ಸಂಬಳ, ಸಾಗಾಟ ,ಇನ್ನಿತರ ವೆಚ್ಚಗಳು ನಿರಂತರವಾಗಿ ಏರುತ್ತಿದ್ದರೂ, ಕಳೆದ ೩ ವರ್ಷಗಳಿಂದ ರೈತರಿಂದ ಖರೀದಿಸುವ ಹಾಲಿಗೆ ದರ ಹೆಚ್ಚಳವಾಗದೆ, ರೈತ ಕುಟುಂಬಗಳು ಹೈನುಗಾರಿಕೆಯಿಂದಲೇ ವಿಮುಖರಾಗುವ ಪರಿಸ್ಥಿತಿ ಬಂದೊದಗಿದೆ.
ಆದ್ದರಿಂದ ಹಾಲು ಉತ್ಪಾದನೆಗೆ ತಗಲುವ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಈಗಿರುವ ಖರೀದಿ ದರಕ್ಕಿಂತ ಕನಿಷ್ಠ ೧೦ ರೂ. ಹೆಚ್ಚಳ ಮಾಡಬೇಕೆಂದು ಉಡುಪಿ ಜಿಲ್ಲಾ ಸಹಕಾರ ಭಾರತಿ ರಾಜ್ಯ ಸರಕಾರನ್ನು ಒತ್ತಾಯಿಸಿದೆ. ಅಲ್ಲದೆ ರೈತರ ಬೇಡಿಕೆಯನ್ನು ಕಡೆಗಣಿಸಿದರೆ ರಾಜ್ಯದಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಸಿದೆ.
ಕಳೆದ ಎರಡು ಮೂರು ತಿಂಗಳುಗಳಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದಲ್ಲಿ ದಿನವಹಿ ಸರಿಸುಮಾರು ೧ ಲಕ್ಷ ಲೀಟರ್ ನಷ್ಟು ಹಾಲು ಸಂಗ್ರಹ ಕಮ್ಮಿ ಆಗುತ್ತಿದ್ದು, ರಾಜ್ಯದ ಕೆಎಂಎಫ್ ವ್ಯಾಪ್ತಿಯಲ್ಲಿ ಸರಿಸುಮಾರು ೪೦ ರಿಂದ ೫೦ ಲಕ್ಷದಷ್ಟು ದಿನವಹಿ ಹಾಲು ಸಂಗ್ರಹದಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಇದು ಹಾಲು ಉತ್ಪಾದನೆಯಲ್ಲಿ ರೈತಾಪಿ ವರ್ಗ ಎದುರಿಸುತ್ತಿರುವ ಸವಾಲು ಮತ್ತು ಆತಂಕಗಳ ಸೂಚನೆಯಾಗಿದೆ.
ಈಗಾಗಲೇ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಅ.೧೧ ರಿಂದ ಹಾಲಿನ ಖರೀದಿ ದರಕ್ಕೆ ಹೆಚ್ಚುವರಿಯಾಗಿ ರೂ. ೨.೦೫ ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿರುವುದು ಸ್ವಾಗತಾರ್ಹ. ಆದರೆ ಕಳೆದ ೬ ತಿಂಗಳಿನಿಂದ ಕರ್ನಾಟಕ ಹಾಲು ಮಹಾಮಂಡಳಿ ಹಾಲು ಮಾರಾಟ ದರವನ್ನು ೩ ರೂ. ಏರಿಸಿ ಅದರ ಎಲ್ಲಾ ಲಾಭವನ್ನು ರೈತಾಪಿ ವರ್ಗಕ್ಕೆ ವರ್ಗಾಯಿಸಬೇಕೆಂದು ಮನವಿ ಮಾಡಿದೆ.
ಸರಕಾರ ಈ ಬಗ್ಗೆ ತುರ್ತು ಕ್ರಮವನ್ನು ಕೈಗೊಂಡು ಶೀಘ್ರವಾಗಿ ಹಾಲಿನ ದರ ಏರಿಸದಿದ್ದರೆ ದೀಪಾವಳಿ ಬಳಿಕ ಗ್ರಾಮೀಣ ಭಾಗದ ಹೈನುಗಾರರನ್ನು ಸಂಘಟಿಸಿ ರಾಜ್ಯದಾದ್ಯಂತ ಪ್ರತಿಭಟನೆ, ಧರಣಿ, ಹೋರಾಟವನ್ನು ನಡೆಸಲಾಗುವುದೆಂದು ಉಡುಪಿ ಜಿಲ್ಲಾ ಸಹಕಾರ ಭಾರತಿಯ ಅಧ್ಯಕ್ಷರಾದ ಬೋಳ ಸದಾಶಿವ ಶೆಟ್ಟಿ ಹಾಗೂ ರಾಜ್ಯ ಸಹಕಾರ ಭಾರತಿ ಹಾಲು ಪ್ರಕೋಷ್ಟದ ಸಂಚಾಲಕರಾದ ಸಾಣೂರು ನರಸಿಂಹ ಕಾಮತ್ ರವರು ಸರಕಾರವನ್ನು ಎಚ್ಚರಿಸಿದ್ದಾರೆ.
Kshetra Samachara
12/10/2022 10:10 pm